ಕಳ್ಳತನ ಪ್ರಕರಣದಲ್ಲಿ ಶೇ. 39% ಸಾಧನೆ

Published on

ಬಳ್ಳಾರಿ : ಕಳೆದ ಒಂದು ವರ್ಷದಲ್ಲಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 106 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ 83 ಆರೋಪಿಗಳನ್ನು ಬಂಧಿಸಿ, ಶೇ.39% ರಷ್ಟು ಸಾಧನೆ ಮಾಡಲಾಗಿದೆ ಎಂದು ಎಸ್ಪಿ ಡಾ.ವಿ.ಜೆ. ಶೋಭಾರಾಣಿ ಹೇಳಿದರು.

ನಗರದ ಎಸ್ಪಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವತ್ತಿನ ಕಾವಾಯಿತು (ಪ್ರಾಪರ್ಟಿ ರಿರ್ಟನ್ ಪರೇಡ್)ನಲ್ಲಿ ನಗದು ಹಾಗೂ ಬಂಗಾರವನ್ನು ಸಂಬಂಧಪಟ್ಟ ಮಾಲೀಕರಿಗೆ ವಿತರಿಸಿ ಮಾತನಾಡಿದರು. ಜಿಲ್ಲಾದ್ಯಂತ ಕಳೆದ ಜನವರಿ ಯಿಂದ ನವೆಂಬರ್‌ವರೆಗೆ 349 ಕಳ್ಳತನ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಆ ಅವಧಿಯಲ್ಲಿ 4.94 ಕೋಟಿ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದು, ಅದರಲ್ಲಿ ಆರೋಪಿಗಳಿಂದ 1.91 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ. ಈಗಾಗಲೇ 1.48 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸಂಬಂಧಪಟ್ಟ ವಾರಸುದಾರರಿಗೆ ಮರು ನೀಡಲಾಗಿದೆ ಎಂದರು.

ಕಳೆದ ಹನ್ನೊಂದು ತಿಂಗಳಲ್ಲಿ ಜಿಲ್ಲೆಯ ಎಲ್ಲ ಠಾಣೆಗಳಲ್ಲಿ 95 ದ್ವಿಚಕ್ರ ವಾಹನಗಳು ಹಾಗೂ ಎರಡು ಲ್ಯಾಪ್‌ಟ್ಯಾಪ್, 2,536 ಗ್ರಾಂ ಬಂಗಾರ, 7,735 ಗ್ರಾಂ ಬೆಳ್ಳಿ, 26.48 ಕೋಟಿ ನಗದು ಹಾಗೂ 64 ಜಾನುವಾರುಗಳು ಕಳ್ಳತನವಾಗಿವೆ ಎಂದು ವಿವರಿಸಿದರು. ಕಳೆದ 2024ರ ಸಾಲಿನಲ್ಲಿ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ 58,375 ಪ್ರಕರಣಗಳನ್ನು ದಾಖಲಿಸಿ, 2.85 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಕೊಟ್ಟಾ ಕಾಯ್ದೆ ಅಡಿಯಲ್ಲಿ 5,917 ಪ್ರಕರಣ ದಾಖಲಿಸಿ 4.86 ಕೋಟಿ ರೂ. ಸಂಗ್ರಹಿಸಲಾಗಿದೆ. ಇನ್ನೂ ಸೈಬರ್ ಕ್ರೈಂ ವ್ಯಾಪ್ತಿಯಲ್ಲಿ 96 ಪ್ರಕರಣದಲ್ಲಿ 15.10 ಕೋಟಿ ರೂ. ಕಳೆದುಕೊಂಡಿದ್ದು ಕೂಡಲೇ ಸಂಬಂಧಪಟ್ಟವರಿಂದ ದೂರು ದಾಖಲಿಸಿಕೊಂಡು 3.63 ಕೋಟಿ ರೂ. ಪ್ರೀಜ್ ಮಾಡಿ ದೂರುದಾರರ ಖಾತೆಗೆ ಮರಳಿಸಿದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net