ಐಎಎಸ್, ಕೆಎಎಸ್ ತರಬೇತಿಗೆ ಕಲ್ಪಿತ ಪರೀಕ್ಷೆ: ಬಳ್ಳಾರಿ ಜಿಲ್ಲೆಯಲ್ಲಿ 3919 ವಿದ್ಯಾರ್ಥಿಗಳು ಹಾಜರು

03012021 Bellary IAS KAS training
Published on

ಬಳ್ಳಾರಿ: ಜಿಲ್ಲಾ ಖನಿಜ ಪ್ರತಿಷ್ಠಾನದ ಅನುದಾನದಡಿ ಜಿಲ್ಲಾಡಳಿತ ಈ ಭಾಗದ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಮತ್ತು ಬ್ಯಾಂಕಿಂಗ್ ತರಬೇತಿ ನೀಡಲು ಮುಂದಾಗಿದ್ದು, ಅಭ್ಯರ್ಥಿಗಳ ಆಯ್ಕೆಗೆ ಭಾನುವಾರ ಕಲ್ಪಿತ ಪರೀಕ್ಷೆ ನಡೆಸಿತು.

ನಗರದ ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2381 ವಿದ್ಯಾರ್ಥಿಗಳು, ಹೊಸಪೇಟೆ 379, ಸಂಡೂರು 180, ಹಡಗಲಿ 126, ಹಗರಿಬೊಮ್ಮನಹಳ್ಳಿ 282, ಸಿರಗುಪ್ಪ 229, ಕೂಡ್ಲಿಗಿ 181, ಹರಪನಹಳ್ಳಿಯಲ್ಲಿ 161 ಸೇರಿ ಒಟ್ಟು 3919 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ಹಾಗೂ ಇತರ ಅಧಿಕಾರಿಗಳು ಸರಳಾದೇವಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ, ಪರಿಶೀಲಿಸಿದರು.

ಕಲ್ಪಿತ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸಿದ 150 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಜ.10ರಂದು ಕೌನ್ಸೆಲಿಂಗ್ ನಡೆಸಲಾಗುತ್ತದೆ. ಅದರಲ್ಲಿ ಅರ್ಹರಾದವನ್ನು ತರಬೇತಿಗೆ ಕಳಿಸಲಾಗುತ್ತದೆ. ರಾಜ್ಯದ ಐಎಎಸ್ ತರಬೇತಿ ಸಂಸ್ಥೆಗಳಲ್ಲೊಂದಾದ ಇನ್‌ಸೈಟ್‌ನ ಸಂಪನ್ಮೂಲ ವ್ಯಕ್ತಿಗಳ ತಂಡ ಜ.ಮೂರನೇ ವಾರದಿಂದ ತರಬೇತಿ ಆರಂಭಿಸಲಿದೆ. ಒಂದು ವಾರದಲ್ಲಿ 5 ದಿನ ಪ್ರತಿನಿತ್ಯ 6 ಗಂಟೆಗಳ ಕಾಲ ತರಬೇತಿ ನೀಡಲಾಗುತ್ತದೆ ಎಂದು ಪ್ರೊಬೆಷನರಿ ಐಎಎಸ್ ಅಧಿಕಾರಿ ರಾಹುಲ್ ಸಂಕನೂರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net