ಸಮಾಜದ ಏಳಿಗೆಗೆ ಶ್ರಮಿಸುವೆ

Published on

ಬಳ್ಳಾರಿ : ಅಲೆಮಾರಿ ಸಮುದಾಯಗಳನ್ನು ರಾಜಕೀಯ, ಆರ್ಥಿಕ, ಸಾಮಾಜಿಕವಾಗಿಯೂ ಮುನ್ನೆಲೆಗೆ ಕೊಂಡೊಯ್ಯಲು ಶ್ರಮಿಸುವೆ ಎಂದು ಕೋಲಾರ ಶಾಸಕ ಕೊತ್ತೂರು ಮಂಜುನಾಥ ಹೇಳಿದರು.

ತಾಲೂಕಿನ ಹಳೇಕೋಟೆ ಗ್ರಾಮದಲ್ಲಿ ಬುಡ್ಗಾ, ಅಲೆಮಾರಿ ಸಮುದಾಯದಿಂದ ಸೋಮವಾರ ಹಮ್ಮಿಕೊಂಡಿದ್ದ ಕರಿಯಪ್ಪ ತಾತನ ನೂತನ ದೇವಸ್ಥಾನ ಮತ್ತು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿರುವ 52 ಅಲೆಮಾರಿ ಸಮುದಾಯಗಳಲ್ಲಿ ಒಂದೆರಡ್ಮೂರು ಸಮುದಾಯಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಉತ್ತಮ ಸ್ಥಾನಗಳಲ್ಲಿವೆಯಾದರೂ, ಉಳಿದಂತೆ ಎಲ್ಲ ಸಮುದಾಯಗಳು ತೀರಾ ಹಿಂದುಳಿದಿವೆ. ನಮ್ಮಲ್ಲಿ ಹೋರಾಟ ಮಾಡುವ ಶಕ್ತಿ ಕಡಿಮೆ. ಶಕ್ತಿ ತುಂಬಿಸಿಕೊಳ್ಳಲು ನನಗೇ ಎರಡು ದಶಕಗಳು ಬೇಕಾಗಿವೆ. ನಾನು ರಾಜಕೀಯವಾಗಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದೇನೆ ಎಂದರು.

ುುಂಬರುವ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳು ಬರುವ ಸಾಧ್ಯತೆಗಳಿವೆ. ಆ ಚುನಾವಣೆಗಳಲ್ಲಿ ಪ್ರತಿ ಜಿಲ್ಲೆಯಲ್ಲಿ ಬುಡ್ಗಾ ಜಂಗಮ ಸೇರಿ ಅಲೆಮಾರಿ ಸಮುದಾಯಗಳಿಂದ ಕನಿಷ್ಠ ನಾಲ್ಕು ಜನರಾದರೂ ಸ್ಪರ್ಧಿಸಲು ಸಿದ್ಧರಾಗಬೇಕು ಎಂದು ಕರೆ ನೀಡಿದರು.

ಬುಡ್ಗಾ, ಅಲೆಮಾರಿ ಸಮುದಾಯಗಳು ಏಳಿಗೆ ಹೊಂದಬೇಕಾದರೆ ಪ್ರತಿಯೊಬ್ಬರು ಮೊದಲು ತಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿ ಮಾಡಬೇಕು. ಸರ್ಕಾರಿ ಶಾಲೆಗಳಿಗೇ ಕಳುಹಿಸಿ. ಆದರೆ, ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಮಾತ್ರ ಕೊಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net