ಬಳ್ಳಾರಿ : ನೂತನ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿಯಿಂದ ಇಲ್ಲಿನ ಗವಿಯಪ್ಪ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಸೋಮವಾರ ನಡೆಯಿತು.
ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸೀರ್ ಹುಸೇನ್ ಮಾತನಾಡಿ, ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೊರೆ ಹೋಗಿದ್ದು ಗೆಲ್ಲುವ ವಿಶ್ವಾಸವಿದೆ. ದೇಶದ ದರ್ಗಾ, ಮಸೀದಿ ಹಾಗೂ ಖಬರಸ್ತಾನ್ ಎಲವನ್ನೂ ರಕ್ಷಣೆ ಮಾಡಬೇಕು. ಕೇಂದ್ರ ಸರ್ಕಾರ ವಕ್ಫ್ ಬೋರ್ಡ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ನಮಾಜ್ ಮಾಡುವ ಸ್ಥಳವನ್ನು ವಕ್ಫ್ ಆಸ್ತಿ ಎಂದು ಹೇಳಲಾಗುತ್ತಿದೆ.
ಬಿಜೆಪಿ ಹಾಗೂ ಪ್ರಧಾನಿ ಮಂತ್ರಿ ನರೇಂದ್ರ ಮೋದಿಯವರಿಗೆ ಮುಸ್ಲಿಂ ಸಮುದಾಯದ ಮೇಲೆ ಏಕೆ ಇಷ್ಟು ದ್ವೇಷ ? ನಿಮ್ಮಂತ ಹತ್ತು ಮೋದಿ ಬಂದರು ಏನು ಮಾಡಲು ಆಗುವುದಿಲ್ಲ ಎಂದು ಕಿಡಿಕಾರಿದರು.
ಕೆಲ ವರ್ಷಗಳ ಹಿಂದೆ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೊಳಿಸಿ ಮನುಷ್ಯರ ದಾಖಲೆ ಕೇಳಿದಿರಿ. ಈಗ ವಕ್ಫ್ ತಿದ್ದುಪಡಿಗೊಳಿಸಿ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ. ಹಲವು ಮಹಾರಾಜರು ದೇಶವನ್ನು ಆಳಿದ್ದು ಎಲ್ಲ ಕಾಲದಲ್ಲಿಯೂ ಮಸೀದಿಗಳಿದ್ದವು ಎಂದರು.
ಪ್ರತಿಯೊಂದು ಚುನಾವಣೆಯಲ್ಲಿಯೂ ಒಂದೊಂದು ವಿಷಯಗಳನ್ನು ಇಟ್ಟುಕೊಂಡು ಜನರ ಭಾವನೆಗಳ ಮೇಲೆ ಆಟವಾಡುತ್ತಿದ್ದಾರೆ. ಹಿಂದೂ ಹಾಗೂ ಮುಸ್ಲಿಂ ಎಂಬುದಾಗಿ ವಿಭಜಿಸಿ ಮತಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಿರಿ ಎಂದು ಅಕ್ರೋಶ ಹೊರಹಾಕಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಇರುವವರೆಗೂ ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ . ಜಿಲ್ಲೆಯಲ್ಲಿಯೂ ವಕ್ಫ್ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದು ಕಾನೂನು ಹೋರಾಟ ನಡೆಸಲಾಗುವುದು ಎಂದರು.
ಶಾಸಕ ಬಿ.ನಾಗೇಂದ್ರ ಮಾತನಾಡಿ, ವಕ್ಫ್ ನೂತನ ಕಾಯ್ದೆಯಿಂದ ಮುಸ್ಲಿಂ ಸಮುದಾಯವನ್ನು ತುಳಿಯುವ ಕೆಲಸ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆಟ ಕರ್ನಾಟಕದಲ್ಲಿ ನಡೆಯುವುದಿಲ್ಲ. ಮುಸ್ಲಿಂ ಹಾಗೂ ಹಿಂದೂಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ಮುಸ್ಲಿಂ ತಂಟೆಗೆ ಕಾಂಗ್ರೆಸ್ ಸುಮ್ಮನೆ ಕೂರಲ್ಲ. ಉಸಿರು ಇರುವವರೆಗೂ ಹಿಂದೂ, ಮುಸ್ಲಿಂ ಹಾಗೂ ದಲಿತರ ರಕ್ಷಣೆಗೆ ಕಾಂಗ್ರೆಸ್ ಜತೆಯಲ್ಲಿ ಇರಲಿದೆ ಎಂದು ಹೇಳಿದರು. ಶಾಸಕ ನಾರಾ ಭರತರೆಡ್ಡಿ, ಸಂಸದ ಈ.ತುಕಾರಾಮ್ ಮಾತನಾಡಿದರು.
ಬಳಿಕ ಡಿಸಿ ಪ್ರಶಾಂತ ಕುಮಾರ ಮಿಶ್ರಾ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಪಂ ಮಾಜಿ ಸದಸ್ಯ ಎ.ಮಾನಯ್ಯ, ಮುಖಂಡ ವೆಂಕಟೇಶ ಹೆಗಡೆ ಇದ್ದರು.
ಬಾಕ್ಸ್ : ವಕ್ಫ್ ನೀತಿ ಖಂಡಿಸಿ ನಡೆದ ಪ್ರತಿಭಟನೆ ಅಂಗವಾಗಿ ಮೋತಿ ವೃತ್ತವನ್ನು ವಾಹನ ಸವಾರರು ಸಂಚಾರಿಸದಂತೆ ಬಂದ್ ಮಾಡಲಾಗಿತ್ತು. ಇದರಿಂದ ವಾಹನಸವಾರರು ಸಂಚಾರಿಸಲು ಪರದಾಡಿದರು. ಮುಂಜಾಗ್ರತೆ ಕ್ರಮವಾಗಿ ವಿವಿಧಡೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಪ್ರತಿಭಟನೆಯಲ್ಲಿ ಸಾವಿರಾರು ಮುಸ್ಮಿಂ ಸಮುದಾಯವರು ಪಾಲ್ಗೂಂಡಿದ್ದರು.