ನ್ಯಾ.ಸದಾಶಿವ ವರದಿ ಶಿಫಾರಸಿಗೆ ವಿರೋಧ: ಬಳ್ಳಾರಿ, ಹೂವಿನಹಡಗಲಿಯಲ್ಲಿ ಪ್ರತಿಭಟನೆ

24092021 Bellary protest
Published on

ಬಳ್ಳಾರಿ/ಹೂವಿನಹಡಗಲಿ: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಚರ್ಚಿಸದೆ ಕೇಂದ್ರಕ್ಕೆ ಶಿಫಾರಸು ಮಾಡದಂತೆ ಆಗ್ರಹಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಶುಕ್ರವಾರ ಬಳ್ಳಾರಿ ಹಾಗೂ ಹೂವಿನಹಡಗಲಿಯಲ್ಲಿ ಪ್ರತಿಭಟನೆ ನಡೆಸಿತು.

ಸಾಂವಿಧಾನಿಕ ಮೀಸಲು ಸೌಲಭ್ಯಗಳನ್ನು ವಂಚಿಸಲು ಕೆಲವರು ಹವಣಿಸುತ್ತಿದ್ದಂತೆ ಕಾಣಿಸುತ್ತದೆ. ಇಂತಹ ಕುತಂತ್ರಗಳು ನಿಲ್ಲಬೇಕು ಎಂದು ಆಗ್ರಹಿಸಿದರು. ಸಮುದಾಯಗಳ ಮಧ್ಯೆ ಪ್ರಚೋದನೆ, ದ್ವೇಷ, ಒಡಕು ಬಿತ್ತಲು ಹೊರಟಿರುವ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಣಸ್ವಾಮಿರನ್ನು ಸಂಪುಟದಿಂದ ಕೈಬಿಡಬೇಕು. ಪರಿಶಿಷ್ಟರ ಮೀಸಲು ಹೆಚ್ಚಳಕ್ಕಾಗಿ ಸರ್ಕಾರಕ್ಕೆ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ಸಲ್ಲಿಸಿರುವ ವರದಿಯನ್ನು ಅಂಗೀಕರಿಸಬೇಕೆಂದು ಮುಖಂಡರು ಒತ್ತಾಯಿಸಿದರು.

ಬಳ್ಳಾರಿಯಲ್ಲಿ ಡಿಸಿ ಕಚೇರಿಯ ತಹಸೀಲ್ದಾರ್ ವಿಶ್ವಜಿತ್ ಮೆಹತಾಗೆ ಮನವಿ ಸಲ್ಲಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಗೋವಿಂದ ನಾಯ್ಕ, ಮುಖಂಡರಾದ ರವಿನಾಯ್ಕ, ರಮಣಪ್ಪ ಭಜಂತ್ರಿ, ಶಂಕರಬಂಡೆ ವೆಂಕಟೇಶ್, ಕೆ.ಶ್ರೀನಿವಾಸ್, ಕೆ.ರಂಗಸ್ವಾಮಿ, ಕೆ.ಸಂತೋಷ್ ಇತರರಿದ್ದರು. ಹೂವಿನಹಡಗಲಿಯಲ್ಲಿ ತಹಸೀಲ್ದಾರ್ ಎ.ಎಚ್.ಮಹೇಂದ್ರಗೆ ಮನವಿ ಸಲ್ಲಿಸಲಾಯಿತು. ತಾಲೂಕು ಅಧ್ಯಕ್ಷ ಬಿ.ಪರಮೇಶ್ವರಪ್ಪ ನಾಯ್ಕ, ಗೋರ್ ಸೇನಾ ಅಧ್ಯಕ್ಷ ರವಿನಾಯ್ಕ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಡಾ. ಕಠಾರಿನಾಯ್ಕ, ಭೋವಿ ಸಂಘಟನೆಯ ಉಪಾಧ್ಯಕ್ಷ ಭೋವಿ ಶ್ರೀನಿವಾಸ್, ಪ್ರಮುಖರಾದ ಪರಶುರಾಮ್ ದೊಡ್ಡಮನಿ, ವಕೀಲ ಚಂದ್ರನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net