ಬಿಸಿಯೂಟ ಕಾರ್ಮಿಕರ ಮುಂದುವರಿಸಲು ಆಗ್ರಹ

Published on

ಬಳ್ಳಾರಿ : ತಾಲೂಕಿನ ಶ್ರೀಧರಗಡ್ಡೆ ಸೇರಿದಂತೆ ತಾಳೂರು ರಸ್ತೆಯ ಸುತ್ತಲಿನ ಎಲ್ಲ ಗ್ರಾಮೀಣ ಶಾಲೆಗಳಿಗೆ ಹೊಸದಾಗಿ ಇಸ್ಕಾನ್ ಅಕ್ಷಯ ಪಾತ್ರೆ(ಎನ್‌ಜಿಒ) ಮೂಲಕ ಬಿಸಿಯೂಟ ವಿತರಿಸಬಾರದೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ಇಲ್ಲಿನ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್ ಮಾತನಾಡಿ, ಶಾಲೆಗಳಲ್ಲಿ ಈಗಾಗಲೇ ಬಿಸಿಯೂಟ ತಯಾರಿಸುತ್ತಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಿ ಇಸ್ಕಾನ್ ಅಕ್ಷಯ ಪಾತ್ರೆ ನೀಡುವ ನೀತಿ ಖಂಡನೀಯ. ಕಳೆದ 20-22 ವರ್ಷಗಳಿಂದ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದಿರುವ ಬಡ ಹೆಣ್ಣು ಮಕ್ಕಳ ಕೆಲಸ ಮಾಡುತ್ತಿದ್ದ ಶಾಲೆಯು ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಒಳಪಡುತ್ತಿದ್ದಂತೆ ಅಡುಗೆ ಸಿಬ್ಬಂದಿ ಕೆಲಸದಿಂದ ವಂಚಿತರಾಗುತ್ತಾರೆ. ಬಿಸಿಯೂಟ ಕಾರ್ಮಿಕರ ಹಿತದೃಷ್ಠಿಯಿಂದ ಯಥಾಸ್ಥಿತಿಯನ್ನು ಮುಂದುವರೆಸಬೇಕು. ಪ್ರತಿ ಶಾಲೆಗಳಲ್ಲಿ ಮೂಲ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು, ಅಡುಗೆ ಮನೆ, ದಿನಸಿ ಸಾಮಗ್ರಿಗಳು ಸೇರಿದಂತೆ ಕಾಲಕಾಲಕ್ಕೆ ನೀಡಿ ಪ್ರತಿಯೊಬ್ಬ ಬಿಸಿಯೂಟ ಕಾರ್ಮಿಕರಿಗೆ ಕೆಲಸದ ಭದ್ರತೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net