

ಹೊಸಪೇಟೆ: ಎರಡು ವರ್ಷ ಕರೊನಾ ಕಾಟದಿಂದ ಮಂಕಾಗಿದ್ದ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸಿದ್ಧತೆ ಜೋರಾಗಿ ನಡೆದಿದೆ.
ನಗರದಲ್ಲಿ ವಿನಾಯಕ ಮೂರ್ತಿಗಳ ಬುಕಿಂಗ್ ನಡೆಯುತ್ತಿದ್ದು, ಕೆಲವು ಗಜಾನನೋತ್ಸವ ಮಂಡಳಿಗಳು ಈಗಾಗಲೇ ಮೂರ್ತಿಗಳನ್ನು ಮುಂಗಡವಾಗಿ ಕಾಯ್ದಿರಿಸಿ, ಹಬ್ಬದ ಸಿದ್ಧತೆಯಲ್ಲಿ ತೊಡಗಿವೆ. ಶಿವ- ಪಾರ್ವತಿ ಗಣೇಶ, ನಿಂತಿರುವ, ಅರ್ಧಪದ್ಮಾಸನ, ಸುಖಾಸನ, ಡೋಲು, ವೀಣೆ, ಗಿಟಾರ್ ಮತ್ತಿತರೆ ಸಂಗೀತ ವಾದ್ಯಗಳನ್ನು ಹಿಡಿದಿರುವ ಗಣೇಶ, ಹಾವಿನಹೆಡೆ ಮೇಲೆ, ಗೋವಿನೊಂದಿಗಿರುವ ನಿಂತಿರುವ ಗಣೇಶ, ಶ್ರೀಕೃಷ್ಣ, ಪರಮೇಶ್ವರನ ಅವತಾರದ ಗಣಪತಿ ಸೇರಿ ನಾನಾ ರೀತಿಯ ಗಣೇಶನ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಬಾಹುಬಲಿ, ಅಪ್ಪು ಗಣಪತಿಗಳನ್ನು ಜನ ಕೇಳಿಕೊಂಡು ಬರುತ್ತಿರುವುದು ಈ ಬಾರಿಯ ವಿಶೇಷ.
ಬೇಡಿಕೆ ಕಮ್ಮಿ ಅಂತಾರೆ ಕಲಾವಿದರು
ಕೋವಿಡ್ ಬರುವ ಮೊದಲು ಭಾರಿ ಬೇಡಿಕೆ ಇರುತ್ತಿತ್ತು. ಕೋವಿಡ್ ನಂತರ ಇದರ ಪ್ರಮಾಣ ಇಳಿಮುಖವಾಗಿದೆ ಎನ್ನುತ್ಥಾರೆ. ಗಣೇಶನ ಮೂರ್ತಿ ತಯಾರಿಸುವ ಕಲಾವಿದರು. ಈ ಮೊದಲು ತಿಂಗಳು ಮುಂಚಿತವಾಗಿಯೇ ಗಣಪತಿ ಮೂರ್ತಿಗಳನ್ನು ಜನ ಕಾಯ್ದಿರಿಸುತ್ತಿದ್ದರು. ಕಲಾವಿದರ ಪ್ರತಿ ತಂಡದಿಂದ ಕನಿಷ್ಠ 150 ರಿಂದ 200 ದೊಡ್ಡ ಗಣಪತಿಗಳು ಮಾರಾಟವಾಗುತ್ತಿದ್ದವು. ಕಲಾವಿದರಿಗೆ ಕೈತುಂಬ ಆದಾಯವೂ ಬರುತ್ತಿತ್ತು. ಈ ಬಾರಿ ಈ ಪ್ರಮಾಣ ಕಡಿಮೆಯಾಗಿದೆ. ಮನೆಯಲ್ಲಿ ಪೂಜಿಸುವ ಸಣ್ಣ ಗಣಪತಿಗಳಿಗೆ ಸಾಧಾರಣ ಬೇಡಿಕೆ ಇದೆ. ಆದ್ದರಿಂದ ಅವುಗಳನ್ನೇ ತಯಾರು ಮಾಡುತ್ತಿದ್ದೇವೆ ಎನ್ನುತ್ತಾರೆ ಗಣಪತಿ ಮೂರ್ತಿ ತಯಾರಕ ನೋನಿ ಗೋಪಾಲ.
ಸರ್ಕಾರದ ಷರತ್ತುಗಳ ಭಯ
ಹಬ್ಬ ಸಮೀಪಿಸುತ್ತಿದ್ದಂತೆ ಸರ್ಕಾರ ಯಾವ ಯಾವ ಷರತ್ತು ವಿಧಿಸುತ್ತದೆಯೋ ಎಂಬ ಆತಂಕ ವಿವಿಧ ಗಜಾನನ ಮಂಡಳಿಗಳನ್ನು ಕಾಡುತ್ತಿದೆ. ಮುಂಗಡವಾಗಿ ಬೃಹತ್ ಗಣಪತಿ ಮೂರ್ತಿಯನ್ನು ಕಾಯ್ದಿರಿಸಿದ ಮೇಲೆ, ಸರ್ಕಾರ ಹತ್ತಾರು ಷರತ್ತುಗಳನ್ನು ವಿಧಿಸಿದರೆ ಎಲ್ಲವೂ ವ್ಯರ್ಥವಾಗುತ್ತದೆ ಎಂಬುದೇ ಈ ಭಯಕ್ಕೆ ಕಾರಣ.
ಈ ಬಾರಿ ಗಣೇಶೋತ್ಸವಕ್ಕೆ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿಲ್ಲ. ಗಣಪತಿ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಎಂಬ ನಿರೀಕ್ಷೆಯಿದೆ. ಗಣೇಶ ಚತುರ್ಥಿಗೆ ಇನ್ನೂ ಹತ್ತು ದಿನ ಸಮಯವಿದೆ. ಉತ್ತಮ ವ್ಯಾಪಾರ ಆಗಲಿ, ಸಂಭ್ರಮದ ಹಬ್ಬ ನಡೆಯಲಿದೆ ಎಂದು ಆಶಿಸುತ್ತಿದ್ದೇವೆ. ಆದರೆ, ಗಜಾನನ ಮಂಡಳಿಗಳು ಮುಂಗಡವಾಗಿ ಕಾಯ್ದಿರಿಸಿದರೆ, ಹೆಚ್ಚಿನ ಗಣೇಶ ಮೂರ್ತಿಗಳನ್ನು ತಯಾರಿಸಲು ಸಾಧ್ಯ.ಅಸಿತ್ ಪಾಲ್ಗಣೇಶ ಮೂರ್ತಿ ತಯಾರಕ