ಬಳ್ಳಾರಿ : ಜಿಲ್ಲೆಯನ್ನು ಕರ್ನಾಟಕದಲ್ಲಿ ಉಳಿಸಿಕೊಳ್ಳುವ ಹೋರಾಟ ಅವಿಸ್ಮರಣೀಯವಾಗಿದ್ದು ಚರಿತ್ರೆಯನ್ನು ಪುನಃ ಅವಲೋಕಿಸಬೇಕಿದೆ ಎಂದು ವಿಎಸ್‌ಕೆ ವಿವಿ ಕುಲಪತಿ ಡಾ.ಎಂ.ಮುನಿರಾಜು ಹೇಳಿದರು.
ಇಲ್ಲಿನ ರಾಘವ ಕಲಾಮಂದಿರದಲ್ಲಿ ಕಸಾಪ ಹಾಗೂ ಪೈಲ್ವಾನ್ ರಂಜಾನ್ ಸಾಬ್ ಗಡಿನಾಡ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ಸಾಹಿತಿ ಸಿದ್ದರಾಮ ಕಲ್ಮಠ ಅವರ ಕರ್ನಾಟಕ ಏಕೀಕರಣದ ಏಕೈಕ ಬಲಿದಾನ ಪೈಲ್ವಾನ್ ಪಿಂಜಾರ್ ರಂಜಾನ್ ಸಾಬ್ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಈವರೆಗೂ ಇತಿಹಾಸದ ಅನೇಕ ಪುಸ್ತಕಗಳಲ್ಲಿ ಕರ್ನಾಟಕ ಏಕೀಕರಣದ ವೇಳೆ ಹುತಾತ್ಮ ರಂಜಾನ್ ಸಾಬ್ ಅವರ ವಿಷಯವು ಬಿಡಿ ಬಿಡಿಯಾಗಿ ದಾಖಲಿಸಲಾಗಿದೆ. ಆದರೆ, ಲೇಖಕ ಸಿದ್ದರಾಮ ಕಲ್ಮಠ ಅವರು ರಂಜಾನ್ ಸಾಬ್ ಬಗ್ಗೆ ಪೂರ್ಣ ಮಾಹಿತಿಯೊಂದಿಗೆ ಓದುಗರಿಗೆ ಪರಿಚಯಿಸಿ ಚಾರಿತ್ರಿಕವಾಗಿ ಆಕರವಾಗಬಹುದಾದ ಕೃತಿಯನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ ಎಂದರು.
ಲೇಖಕ ಎಂ.ಎಂ.ಶಿವಪ್ರಕಾಶ್ ಮಾತನಾಡಿ, ಕರ್ನಾಟಕ ಏಕೀಕರಣದಲ್ಲಿ ಹುತಾತ್ಮ ಪಿಂಜಾರ ರಂಜಾನ್ ಸಾಬ್ ರವರ ಜೀವನ ಕಥನವನ್ನು ಯಾವುದೇ ರೀತಿಯಲ್ಲಿ ವೈಭವೀಕರಿಸದೆ ವಸ್ತು ನಿಷ್ಠ ವಿಷಯಗಳನ್ನು ದಾಖಲಿಸಿ ಜನರು ಮತ್ತು ವಿದ್ಯಾರ್ಥಿಗಳು ಪ್ರೇರಣೆ ಪಡೆಯುವಂತಹ ಕೃತಿಯಾಗಿದೆ ಎಂದರು.
ಕೃತಿ ರಚನೆಕಾರ ಸಿದ್ದರಾಮ ಕಲ್ಮಠ ಮಾತನಾಡಿ, ಏಕೀಕರಣದ ಹೋರಾಟದಲ್ಲಿ ಅಳವಂಡಿ ಶಿವಮೂರ್ತಿಸ್ವಾಮಿ, ಚನ್ನಬಸಪ್ಪ, ಹರಗಿನ ಡೋಣಿ ಸಣ್ಣಬಸವನಗೌಡ, ವೈ ನಾಗೇಶ್‌ಶಾಸ್ತ್ರಿ, ವೈ.ಮಹಾಬಲೇಶ್ವರಪ್ಪ, ಅಲ್ಲಂ ಕರಿಬಸಪ್ಪ, ಅಲ್ಲಂ ಸುಮಂಗಳಮ್ಮ, ತೊಗರಿ ವೀರ ಮಲ್ಲಪ್ಪ, ಜೋಳದರಾಶಿ ದೊಡ್ಡನಗೌಡ ಸೇರಿದಂತೆ ಹಲವರ ಮಹನೀಯರ ದಿಟ್ಟ ಹೋರಾಟದಿಂದ ಕರ್ನಾಟಕದಲ್ಲಿ ಉಳಿಯಿತು ಎಂದು ಸ್ಮರಿಸಿದರು.
ಪ್ರಮುಖರಾದ ಯಲ್ಲನಗೌಡ ಶಂಕರಬಂಡೆ, ಪಿ.ಶರ್ಮಾಸ್ ವಲಿ, ಎಚ್. ದಾದಾ ಕಲಂದರ, ಪಿ.ಮೌಲಾಲಿ, ಅಮಾತಿ ಬಸವರಾಜ ಇದ್ದರು.