ಸಹಾಯವಾಣಿ ಸದುಪಯೋಗ ಪಡೆದು ಅಪರಾಧ ತಡೆಯಲು ನಾಗರಿಕರಿಗೆ ಸಚಿವ ಆನಂದಸಿಂಗ್ ಮನವಿ

Ballari ERSS Helpline Drive
ಬಳ್ಳಾರಿಯ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಇಆರ್‌ಎಸ್‌ಎಸ್ ಸಹಾಯವಾಣಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಚಿವ ಆನಂದಸಿಂಗ್ ತುರ್ತು ವಾಹನಗಳಿಗೆ ಚಾಲನೆ ನೀಡಿದರು.
Published on

ಬಳ್ಳಾರಿ: ಸಾರ್ವಜನಿಕರು ಸಹಾಯವಾಣಿಯ ಸದುಪಯೋಗ ಪಡೆದು ಜಿಲ್ಲೆಯಲ್ಲಿನ ಅಪರಾಧ ತಡೆಗೆ ಸಹಕರಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಹೇಳಿದರು.

ಬಳ್ಳಾರಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪೊಲೀಸ್, ಅಗ್ನಿ, ವಿಪತ್ತಿಗೆ ಸಂಬಂಧಿಸಿದ ಇಆರ್‌ಎಸ್‌ಎಸ್ ಸಹಾಯವಾಣಿ 112 ಮತ್ತು 19 ಇಆರ್‌ಎಸ್‌ಎಸ್ ತುರ್ತು ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರ ನೆರವಿಗಾಗಿ ಕೇಂದ್ರ ಸರ್ಕಾರ ತುರ್ತು ವಾಹನ ಮತ್ತು ಸಹಾಯವಾಣಿ ಸೇವೆ ಆರಂಭಿಸಿದೆ. ಈ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ವಾಹನ ನೀಡಲಾಗಿದ್ದು, ಅದರಲ್ಲೂ ಬಳ್ಳಾರಿ ಜಿಲ್ಲೆಗೆ ಅಧಿಕ ವಾಹನಗಳನ್ನು ಕೊಡಲಾಗಿದೆ. ನಾಗರಿಕರು ಇವುಗಳ ಸಹಾಯ ಪಡೆದು ವಿಪತ್ತುಗಳನ್ನು ತಡೆಯುವ ಕೆಲಸ ಮಾಡಬೇಕು ಎಂದರು.

ದೇಶದಲ್ಲಿನ ಅಪರಾಧ ತಡೆಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ಇಂದಿನಿಂತ ದೇಶದಾದ್ಯಂತ ಇದು ಕಾರ್ಯರೂಪಕ್ಕೆ ಬರಲಿದೆ. ಬಳ್ಳಾರಿ ಜನರಿಗೆ ಯಾವುದೇ ರೀತಿಯ ತೊಂದರೆ ಆದರೂ ತಕ್ಷಣ ಸ್ಪಂದಿಸುವ ಕೆಲಸ ಪೊಲೀಸ್ ಇಲಾಖೆಯಿಂದ ಆಗುತ್ತದೆ ಎಂದರು.

ಎಸ್ಪಿ ಸೈದುಲು ಅದಾವತ್ ಮಾತನಾಡಿ, ಜಿಲ್ಲೆಯಲ್ಲಿ ಜನಸಂಖ್ಯೆ ಮತ್ತು ಪೊಲೀಸ್ ಠಾಣೆಗಳು ಹೆಚ್ಚಿರುವುದರಿಂದ ತಮಗೆ ತುರ್ತು ವಾಹನಗಳನ್ನು ಹೆಚ್ಚಾಗಿಯೇ ನೀಡಲಾಗಿದೆ. ಇವುಗಳು ಸದ್ಬಳಕೆ ಆಗಬೇಕು. 112 ನಂಬರ್‌ಗೆ ಯಾರೇ ಕಾಲ್ ಮಾಡಿದರೂ 15 ಸೆಕೆಂಡಿನೊಳಗೆ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು. ನಗರ ಶಾಸಕ ಸೋಮಶೇಖರ್ ರೆಡ್ಡಿ, ಎಎಸ್ಪಿ ಬಿ.ಎನ್. ಲಾವಣ್ಯ ಮಾತನಾಡಿದರು. ಡಿವೈಎಸ್ಪಿ ರಮೇಶ್ ಕುಮಾರ್ ಮತ್ತು ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net