ಬಳ್ಳಾರಿ : ಎಸ್ ಬಿ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಒದಗಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.
ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಬೃಂದಾ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂಕುರಂ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಎಸ್ ಬಿ ಸಂಸ್ಥೆಯ ನೂತನ ಶಾಲಾ ಕಟ್ಟಡಗಳ ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಯು ಕೇವಲ ಶಿಕ್ಷಣಕ್ಕೆ ಮಾತ್ರ ಅದ್ಯತೆ ನೀಡದೆ, ಕ್ರೀಡೆಗಳಿಗೂ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ವಿದ್ಯಾರ್ಥಿಗಳು ಕೇವಲ ಶಿಕ್ಷಣ ಮಾತ್ರವಲ್ಲದೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೇಹ ಸದೃಢಗೊಳ್ಳುತ್ತದೆ ಎಂದರು. ಇನ್ನೂ ಮುಂದಿನ ದಿನಗಳಲ್ಲಿ ಶಾಲಾ ಆವರಣದಲ್ಲಿ ಬೃಹತ್ ಮೈದಾನ ನಿರ್ಮಿಸುವ ಉದ್ದೇಶ ಒಳ್ಳೆಯದು. ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ ಮಾಡುವ ವಾತವಾರಣ ಈ ಶಾಲೆಯಲ್ಲಿದೆ, ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ಬೆಳೆಯಲು ಸಹಾಯ ಮಾಡುವೆ ಎಂದು ಭರವಸೆ ನೀಡಿದರು. ಭಾರತದಲ್ಲಿ ಜ್ಞಾನ ಹಾಗೂ ವಿಜ್ಞಾನಕ್ಕೆ ತನ್ನದೆ ಆದ ವಿಶೇಷ ಪರಂಪರೆಯಿದೆ. ಈಗಾಗಲೇ ವಿಶ್ವ ಮಟ್ಟದಲ್ಲಿ ಭಾರತೀಯರು ಛಾಪು ಮೂಡಿಸಿದ್ದಾರೆ. ಶಿಕ್ಷಣ ಹಂಚಿದಷ್ಟು ಜ್ಞಾನ ಹೆಚ್ಚುತ್ತಿದ್ದು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಶಿಕ್ಷಣ ಯಾವತ್ತಿಗೂ ನಿಮ್ಮನ್ನು ಉನ್ನತ ಸ್ಥಾನದಲ್ಲಿ ಇಡುತ್ತದೆ. ರಾಜ್ಯದಲ್ಲಿ ಹೊಸ ಶಿಕ್ಷಣ ಪದ್ಧತಿ ಅನುಷ್ಠಾನ ಮಾಡಲಾಗಿದೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿ ಮಾಡುವುದರಿಂದ ಪ್ರಾದೇಶಿಕ ಭಾಷೆಗಳು ಕಲಿಯಲು ಸಹಾಯಕವಾಗಲಿದೆ. ಯಾವ ನೀತಿಯು ಪ್ರಾದೇಶಿಕ ಭಾಷೆಯನ್ನು ನಿಯಂತ್ರಣ ಮಾಡುತ್ತಿಲ್ಲ. ಭಾರತದ ಅರ್ಥ ವ್ಯವಸ್ಥೆ ಸದ್ಯ ಪ್ರಪಂಚದ ಐದನೇ ಸ್ಥಾನದಲ್ಲಿದ್ದು ಮೂರನೇ ಸ್ಥಾನಕ್ಕೆ ಏರಲು ಪ್ರಯತ್ನ ನಡೆಸುತ್ತಿದೆ. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವಲ್ಲಿ ಕಾಳಜಿ ವಹಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ಹಿಂದುಳಿದ ಜಿಲ್ಲೆಯ ಶಿಕ್ಷಣ ಸಂಸ್ಥೆ ಕಾರ್ಯಕ್ರಮಕ್ಕೆ ರಾಜ್ಯಪಾಲರು ಆಗಮಿಸಿರುವುದು ಹೆಮ್ಮೆಯ ವಿಷಯ. ಸುತ್ತಲಿನ ಭಾಗದ ಗ್ರಾಮಗಳಿಗೆ ಶಿಕ್ಷಣ ಒದಗಿಸುವ ಉದ್ದೇಶದಿಂದ ಸಂಸ್ಥೆ ಸ್ಥಾಪಿಸಲಾಗಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಎಸ್ ಬಿ ಗ್ರೂಪ್ ವಿಶ್ವವಿದ್ಯಾಲಯ ಸ್ಥಾಪಿಸಿ, ಉದ್ಘಾಟನೆಗೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಭವಿಷ್ಯ ನುಡಿದರು.
ಎಸ್ ಬಿ ಗ್ರೂಪ್ ಸಿಇಒ ಭವ್ಯ ಶೇಖರ್, ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಲಕ್ಷ್ಮೀ ಅರುಣಾ ಮಾತನಾಡಿದರು.