ಸಮತೋಲಿತ ಆರೋಗ್ಯ ಹೊಂದಿ

Published on

ಬಳ್ಳಾರಿ : ಪ್ರಸ್ತುತದ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ಸಮತೋಲಿತ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್ ಇಲಾಖೆ ಸಹಯೋಗದೊಂದಿಗೆ ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ ಎಂಬ ಘೋಷವಾಕ್ಯದಡಿ ಮಂಗಳವಾರ ಆಯೋಜಿಸಿದ್ದ 10 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಯುರ್ವೇದ ವೈದ್ಯಕೀಯ ಪದ್ಧತಿಯು ಸಮತೋಲಿತ ಜೀವನಶೈಲಿ, ಗಿಡಮೂಲಿಕೆ ಚಿಕಿತ್ಸೆ ಮತ್ತು ಯೋಗದ ಮಹತ್ವವನ್ನು ಉತ್ತೇಜಿಸುತ್ತದೆ. ಜಿಲ್ಲಾ ಆಯುಷ್ ಇಲಾಖೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಂ.ವಿರೂಪಾಕ್ಷ ಮಾತನಾಡಿ, ಜಿಲ್ಲೆಯಲ್ಲಿರುವ 42 ಆಯುಷ್ ಚಿಕಿತ್ಸಾಲಯಗಳಲ್ಲಿ 20 ಆಯುಷ್ ವೈದ್ಯಾಧಿಕಾರಿಗಳ ಮೂಲಕ ಆಯುಷ್ ಚಿಕಿತ್ಸಾ ಸೇವೆ ಒದಗಿಸಲಾಗುತ್ತಿದೆ. 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಬಳಿಕ ಧನ್ವಂತರಿ ಶ್ಲೋಕ ಪಠಿಸಲಾಯಿತು. ಸಾಂಕೇತಿಕವಾಗಿ ಔಷಧ ಗಿಡಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net