ಒಂದು ತಿಂಗಳಲ್ಲಿ 64 ಕೋಟಿ ರೂ. ಅನುದಾನ ಬಳಕೆಗೆ ಸೂಚನೆ: ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಹೇಳಿಕೆ

08012021 Bellary H Hanumantappa
Published on

ಬಳ್ಳಾರಿ: ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮೀಸಲಿರುವ 64 ಕೋಟಿ ರೂ. ಅನುದಾನ ಫೆ.8ರೊಳಗೆ ವಿವಿಧ ಯೋಜನೆಗಳಿಗೆ ಬಳಕೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಹೇಳಿದರು.

ನಿಗಮಕ್ಕೆ ರಾಜ್ಯ ಸರ್ಕಾರ 64 ಲಕ್ಷ ರೂ. ನೀಡಿದೆ. ಆದರೆ, ಕರೊನಾ ಕಾರಣದಿಂದ ಕರ್ಮಚಾರಿಗಳ ಅಭಿವೃದ್ಧಿ ಕಾರ್ಯಕ್ಕೆ ಬಳಸಲು ಆಗಿಲ್ಲ. ಹೀಗಾಗಿ ಫೆ.8ರೊಳಗೆ ಗಂಗಾ ಕಲ್ಯಾಣ, ನೇರಸಾಲ, ಭೂ ಒಡೆತನ ಯೋಜನೆ ಮತ್ತು ವ್ಯಾಪಾರ, ಸಣ್ಣ ಕೈಗಾರಿಕೆ, ಸ್ವಯಂ ಉದ್ಯೋಗಗಳಲ್ಲಿ ಅನುದಾನ ಹಂಚಿಕೆ ಮಾಡಲು ಆದೇಶಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಿಂದಿನ ಸರ್ಕಾರ ನಡೆಸಿದ ಸಮೀಕ್ಷೆ ಪ್ರಕಾರ 1,42,291 ಕರ್ಮಚಾರಿಗಳು ಇದ್ದಾರೆ. ಆದರೆ, ಇದು ಸರಿಯಿಲ್ಲ. ಆದ್ದರಿಂದ ಸರ್ಕಾರ, ಖಾಸಗಿ, ಅರೆಸರ್ಕಾರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕರ್ಮಚಾರಿಗಳು ಒಳಗೊಂಡಂತೆ ಮರು ಸಮೀಕ್ಷೆ ನಡೆಸಲಾಗುವುದು. ಸಮೀಕ್ಷೆ ಮುಗಿದ ಬಳಿಕ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಜ.13ರಂದು ಸಫಾಯಿ ಕರ್ಮಚಾರಿಗಳ ರಾಜ್ಯಮಟ್ಟದ ಸಭೆ ಆಯೋಜಿಸಲಾಗಿದೆ. ಸಭೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ 1500 ಕೋಟಿ ರೂ. ಅನುದಾನ ನೀಡಲು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net