ಬಳ್ಳಾರಿ : ಕಳೆದ ಇಪ್ಪತೈದು ವರ್ಷಗಳ ಹಿಂದಯೇ ನಗರದಲ್ಲಿ ಗುರುಭವನ (ಶಿಕ್ಷಕರ ಭವನ )ನಿರ್ಮಿಸಲು ರಾಜ್ಯ ಸರ್ಕಾರ ಸ್ಥಳ ಗುರುತಿಸಿದೆ. ಆದರೆ, ಈವರೆಗೂ ಕಾಮಗಾರಿಗೆ ಅನುದಾನ ನೀಡದೆ ಇರುವುದರಿಂದ ಭೂಮಿಪೂಜೆ ನೆರವೇರಿಲ್ಲ.
ಕಳೆದ ಹಲವು ವರ್ಷಗಳಿಂದ ಸಾಕಷ್ಟು ಪ್ರಮಾಣದ ಶಿಕ್ಷಕರು ಗುರುಭವನಕ್ಕೆ ಶ್ರಮಿಸಿದ ಪರಿಣಾಮ 1997- 98ರ ಆ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಗೌರಿ ಎಸ್. ತ್ರಿವೇದಿ ಅವರು ಇಲ್ಲಿನ ಜಿಲ್ಲಾ ಕ್ರೀಡಾಂಗಣದ ರಸ್ತೆಯ ಗೃಹರಕ್ಷಕ ಕಚೇರಿಯ ಬಳಿ ಒಂದು ಎಕರೆ ಸ್ಥಳವನ್ನು ಗುರುಭವನದ ನಿರ್ಮಾಣಕ್ಕೆ ಮೀಸಲಿಟ್ಟಿದ್ದರು. ಆದರೆ, ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಈವರೆಗೂ ಕಾಮಗಾರಿ ಮಾತ್ರ ಆರಂಭವಾಗದೆ ಇರುವುದು ಜಿಲ್ಲೆಯ ಸಾವಿರಾರು ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
ಗುರುಭವನಕ್ಕೆ ಏಕೆ ? : ನಗರದಲ್ಲಿ ಗುರುಭವನ ನಿರ್ಮಿಸುವುದರಿಂದ ಜಿಲ್ಲೆಯ ನಗರ ಹಾಗೂ ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸಲು, ನುರಿತ ಶಿಕ್ಷಕರಿಂದ ಹೊಸ ಶಿಕ್ಷಕರಿಗೆ ತರಬೇತಿ, ಶಿಕ್ಷಕರ ಮಕ್ಕಳಿಗೆ ಸಾಂಸ್ಕ್ರತಿಕ ಚಟುವಟಿಕೆ, ಶಿಕ್ಷಕರ ದಿನಾಚರಣೆ, ಪ್ರತಿಭಾ ಕಾರಂಜಿ ಹಾಗೂ ಬಡ ಶಿಕ್ಷಕರ ಮಕ್ಕಳ ವಿವಾಹ ನಡೆಸಲು ಸೇರಿದಂತೆ ವಿವಿಧ ರೀತಿಗೆ ಬಳಸಿಕೊಳ್ಳಬಹುದು. ಅಲ್ಲದೆ, ಗುರುಭವನ ಇತರೆ ಕಾರ್ಯಕ್ರಮಗಳಿಗೆ ಖಾಸಗಿಯವರೆಗೆ ಬಾಡಿಗೆ ನೀಡುವುದರಿಂದ ಅದರ ಹಣ ಸಂಘದ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈಗಾಗಲೇ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುರುಭವನಗಳು ನಿರ್ಮಾಣವಾಗಿವೆ. ಜಿಲ್ಲೆಯಲ್ಲಿ ಡಿಎಂಎಫ್, ಕೆಕೆಆರ್‌ಡಿಬಿ ಸೇರಿದಂತೆ ವಿವಿಧ ಅನುದಾನ ಮೂಲಗಳಿದ್ದು ಅವುಗಳಿಗೆ ಸಕ್ರಿಯವಾಗಿ ಡಿಪಿಆರ್ ರೂಪಿಸಿ ನಿರ್ಮಿಸಲು ಸ್ಥಳೀಯ ಶಾಸಕರ ಹಾಗೂ ಸಚಿವರ ನಿರ್ಲಕ್ಷೃ ಎದ್ದು ಕಾಣುತ್ತಿದೆ. ನಗರದಲ್ಲಿ ಬೇರೆ ಇಲಾಖೆಯ ವಿವಿಧ ಭವನಗಳು ನಿರ್ಮಾಣಗೊಂಡಿವೆ. ಮಕ್ಕಳ ಶೈಕ್ಷಣಿಕ ಒತ್ತು ಕೊಡುವ ಶಿಕ್ಷಕರ ಭವನಕ್ಕೆ ತಾತ್ಸರ ಏಕೆ ಎಂಬುದು ತಿಳಿಯುತ್ತಿಲ್ಲ.
ಕಾರ್ಯಕ್ರಮಕ್ಕೆ ಅಲೆದಾಟ : ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆಯೋಜಿಸುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲು ಪ್ರತಿ ವರ್ಷ ಒಂದು ಸ್ಥಳ ಬದಲಾವಣೆಗೊಳ್ಳುವುದು ಸಾಮಾನ್ಯವಾಗಿದೆ. ನಗರದ ರಾಘವ ಕಲಾಮಂದಿರ, ಬಿಡಿಎಎ ಸಭಾಂಗಣ, ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರ, ವಾಲ್ಮೀಕಿ ಭವನ, ಕಮ್ಮ ಭವನ ಸೇರಿದಂತೆ ವಿವಿಧಡೆ ನಡೆಯುತ್ತಿರುವುದರಿಂದ ಶಿಕ್ಷಕರ ಪಾಲಕರು ಹಾಗೂ ಸಂಬಂಧಿಗಳು ವೇದಿಕೆ ಕಾರ್ಯಕ್ರಮಕ್ಕಾಗಿ ಅಲೆದಾಡುತ್ತಿದ್ದಾರೆ. ಅದೇ ಸಮಾರಂಭದಲ್ಲಿ ಸಚಿವರು ಹಾಗೂ ಶಾಸಕರು ಈ ವರ್ಷ ಭವನ ನಿರ್ಮಾಣ ಮಾಡುವುದಾಗಿ ಹೇಳಿಕೆ ಕೂಡ ನೀಡುವುದು ದೊಡ್ಡ ಭರವಸೆಯಾಗಿಯೇ ಉಳಿದಿದೆ. ಈಚೆಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಚಿವರಾಗಿದ್ದ ವೇಳೆ ವಾಲ್ಮೀಕಿ ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮುಂದಿನ ವರ್ಷ ಶಿಕ್ಷಕರ ಭವನ ನಿರ್ಮಿಸಲಾಗುವುದು ಎಂಬ ಮಾತು ಹೇಳಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಇನ್ನೂ ಗುರುಭವನಕ್ಕೆ ನೀಡಿರುವ ಸ್ಥಳದಲ್ಲಿ ಸದ್ಯ ನಿತ್ಯವೂ ಜೆಸಿಬಿ ಹಾಗೂ ಕ್ರೇನ್‌ಗಳ ನಿಲ್ದಾಣವಾಗಿದೆ.
12 ಕೋಟಿ ರೂ. ಬೇಡಿಕೆ : ನಗರದಲ್ಲಿ ಗುರುಭವನಕ್ಕೆ ಮೀಸಲಿಟ್ಟಿರುವ ಸ್ಥಳದಲ್ಲಿ ಸುಸ್ಸಜ್ಜಿತ ಬಹುಮಹಡಿ ಕಟ್ಟಡಕ್ಕಾಗಿ 12 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕಟ್ಟಡದ ಕೆಳ ಮಹಡಿಯಲ್ಲಿ ಕಿಚನ್ ಹಾಲ್, ಮೊದಲ ಮಹಡಿ ಶಿಕ್ಷಕರ ಸಭಾಂಗಣ ಹಾಗೂ ಎರಡನೇ ಮಹಡಿಯಲ್ಲಿ ಕೊಠಡಿಗಳು ನಿರ್ಮಿಸಲು ಉದ್ದೇಶಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ಮಧುಬಂಗಾರಪ್ಪ, ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಸ್ಥಳೀಯ ಶಾಸಕರಿಗೂ ಹಾಗೂ ಜಿಲ್ಲಾಧಿಕಾರಿಗಳಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದೆ.
ಕೋಟ್.... ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಭವನ ನಿರ್ಮಾಣಕ್ಕೆ ಎಲ್ಲ ಸರ್ಕಾರದ ಸಚಿವರು ಹಾಗೂ ಶಾಸಕರಿಗೆ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಈವರೆಗೂ ಕಾಮಗಾರಿಗೆ ಅನುದಾನ ಬಿಡುಗಡೆಗೊಳಿಸದೆ ಇರುವುದು ಬೇಸರ ಮೂಡಿಸಿದೆ.
- ಸಿ.ನಿಂಗಪ್ಪ, ಜಿಲ್ಲಾಧ್ಯಕ್ಷ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬಳ್ಳಾರಿ.
ಕೋಟ್... ಶಿಕ್ಷಕರ ಸಂಘದಿಂದ ಅನುದಾನಕ್ಕೆ ಮನವಿ ಸಲ್ಲಿಸಿದ್ದು, ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆಯಲಾಗಿದೆ. ಈ ಬಾರಿ ಕೆಕೆಆರ್‌ಡಿಬಿಯಲ್ಲಿ ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ.
- ಪ್ರಶಾಂತ ಕುಮಾರ ಮಿಶ್ರಾ, ಡಿಸಿ, ಬಳ್ಳಾರಿ.