

ಬಳ್ಳಾರಿ: 1, 3 ಮತ್ತು 5ನೇ ಸೆಮಿಸ್ಟರ್‌ನ ಪದವಿ ಪರೀಕ್ಷೆ ನಡೆಸದಂತೆ ಆಗ್ರಹಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ವಿಎಸ್‌ಕೆ ವಿವಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ಜೆ.ಪಿ.ರವಿಕಿರಣ್ ಮಾತನಾಡಿ, ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸುವುದಾಗಿ ವಿಎಸ್ ಕೆವಿವಿ ಹೊರಡಿಸಿರುವ ಸುತ್ತೋಲೆ, ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಿದೆ. ಕಳೆದ 2 ತಿಂಗಳಿಂದ ಪ್ರಸ್ತುತ ಸೆಮಿಸ್ಟರ್‌ಗಳ ಆನ್‌ಲೈನ್ ತರಗತಿಗಳು ನಡೆಯುತ್ತಿವೆ. ಇತ್ತ ಪರೀಕ್ಷೆ ಕುರಿತು ಸರ್ಕಾರ ಯಾವುದೇ ನಿರ್ದಿಷ್ಟ ನಿರ್ಧಾರ ಕೈಗೊಂಡಿಲ್ಲ. ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದೇ ಮುಖ್ಯ ಆದ್ಯತೆ ಎಂದು ಹೇಳಿದರೂ ವಿವಿಯು ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿರುವುದು ಖಂಡನೀಯ ಎಂದರು.
ಈಗ ಹಿಂದಿನ ಸೆಮಿಸ್ಟರ್ ಪರೀಕ್ಷೆ ಜುಲೈ ಕೊನೇ ವಾರದಿಂದ ಆಗಸ್ಟ್ ಮೊದಲ ವಾರದಲ್ಲಿ ಮುಗಿಸಿ ನಂತರ ಸೆಪ್ಪೆಂಬರ್ ಒಳಗೆ 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಒತ್ತಡವಾಗಲಿದೆ. ಆದ್ದರಿಂದ ವಿವಿ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.