

ಬಳ್ಳಾರಿ : ಏಳನೇ ವೇತನ ಆಯೋಗ ಅನುಷ್ಠಾನ ಹಾಗೂ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸುವಂತೆ ಆಗ್ರಹಿಸಿ ಸರ್ಕಾರಿ ನೌಕರರ ಸಂಘದಿಂದ ಬುಧವಾರ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಯಿತು.
ಜಿಲ್ಲಾಧಿಕಾರಿ ಕಚೇರಿ, ಮಹಾನಗರ ಪಾಲಿಕೆ, ತಾಲೂಕು ಕಚೇರಿ, ಕಂದಾಯ, ಶಿಕ್ಷಣ ಇಲಾಖೆ ಸೇರಿದಂತೆ ಬಹುತೇಕ ಕಚೇರಿಗಳು ಬಂದ್ ಆಗಿದ್ದವು.
ಪ್ರತಿನಿತ್ಯ ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗೆ ನೂರಾರು ಜನರು ಸಮಸ್ಯೆಯನ್ನು ಹೊತ್ತು ಬರುತ್ತಿದ್ದರು. ಆದರೆ ಮುಷ್ಕರದಿಂದಾಗಿ ನೌಕರರು ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರು. ಇದರಿಂದಾಗಿ ಬಹುತೇಕ ಕಚೇರಿಗಳಿಗೆ ಬೀಗ ಬಿದ್ದಿತ್ತು. ಜನರು ಹಾಗೂ ಸಿಬ್ಬಂದಿ ಇಲ್ಲದೆ ಎಲ್ಲೆಡೆ ಬಿಕೋ ಎನ್ನುತ್ತಿರುವ ವಾತಾವರಣ ಸೃಷ್ಠಿಗೊಂಡಿತ್ತು.
ಶಾಲೆ-ಕಾಲೇಜುಗಳಿಗೂ ಶಿಕ್ಷಕರು, ಉಪನ್ಯಾಸಕರು ಗೈರಾಗಿದ್ದ ಹಿನ್ನೆಲೆ ಶಾಲೆ-ಕಾಲೇಜುಗಳು ಅಘೋಷಿತ ಬಂದ್ ಆಗಿದ್ದವು. ಆಸ್ಪತ್ರೆಗಳಲ್ಲಿ ನೌಕರರು ಇಲ್ಲದೆ ಇರುವುದರಿಂದ ಕೆಲವೆಡೆ ಆರೋಗ್ಯ ಕೇಂದ್ರಗಳಲ್ಲಿ ಹೊರರೋಗಿಗಳು ಚಿಕಿತ್ಸೆಗೆ ಬಂದ್ ವಾಪಸ್ ತೆರಳುವಂತಾಯಿತು.