ಬಳ್ಳಾರಿ : ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಸದೃಢಢವಾಗಿರಲು ಸಾಧ್ಯ ಎಂದು ವಿಎಸ್‌ಕೆ ವಿವಿ ಕುಲಪತಿ ಪ್ರೊ.ಎಂ.ಮುನಿರಾಜು ಹೇಳಿದರು.
ಇಲ್ಲಿನ ವಿಎಸ್‌ಕೆ ವಿವಿಯಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ ಅವರ ಜನ್ಮದಿನದ ಸ್ಮರಣಾರ್ಥ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡೆಯ ಶ್ರೇಷ್ಠತೆ, ಗೌರವ ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮೇಜರ್ ಧ್ಯಾನಚಂದ ಅವರು ನಮಗೆಲ್ಲ ಸ್ಪೂರ್ತಿ ಎಂದರು. ನಮ್ಮ ಸಮಾಜ ಆರೋಗ್ಯಯುತವಾಗಿರಲು ಕ್ರೀಡಾ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಅತ್ಯಂತ ಅವಶ್ಯಕವಾದವು
ಕುಲಸಚಿವ ಸಿ.ನಾಗರಾಜು ಮಾತನಾಡಿ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಕ್ರೀಡಾ ಚಟುವಟಿಕೆಗಳನ್ನು ದಿನನಿತ್ಯದ ಭಾಗವಾಗಿ ಸ್ವೀಕರಿಸಬೇಕು. ಅಂದಾಗ ಮಾತ್ರ ಜೀವನ ಪರಿಪೂರ್ಣವಾಗುತ್ತದೆ ಎಂದರು.
ಇದೇ ವೇಳೆ ಅಖಿಲ ಭಾರತ ಮತ್ತು ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ವಿವಿಯ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು. ಕ್ರೀಡಾ ದಿನದ ಅಂಗವಾಗಿ ವಿವಿ ಸಿಬ್ಬಂದಿಗೆ ಕ್ರೀಡಾಕೂಟ ಹಮ್ಮಿಕೊಳ್ಳಲಾಯಿತು.