ಸರಳ ಹೆರಿಗೆಗೆ ಅದ್ಯತೆ ವಹಿಸಿ

Published on

ಬಳ್ಳಾರಿ : ಗರ್ಭಿಣಿಯರ ಹೆರಿಗೆಗೆ ಮೂರು ದಿನದ ಮುನ್ನ ಆಸ್ಪತ್ರೆಗಳಲ್ಲಿ ವೈದ್ಯರು ನಿಗಾವಹಿಸಿ ಸರಳ ಹೆರಿಗೆಗೆ ಆದ್ಯತೆ ನೀಡಿ ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಹೇಳಿದರು.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ಭೇಟಿ ನೀಡಿ ಗಂಡಾಂತರ ಗರ್ಭಿಣಿಯರ ದಾಖಲಾತಿಗಾಗಿ 5 ಹಾಸಿಗೆಗಳನ್ನು ಕಾಯ್ದಿರಿಸಿ ದಾಖಲಾದ ಗರ್ಭಿಣಿಯರ ಆರೋಗ್ಯ ವಿಚಾರಿಸಿ ಮಾತನಾಡಿದರು. ಗಂಡಾಂತರ ಗರ್ಭಿಣಿಯರ ಹೆರಿಗೆಯು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಹಣ ಪಾವತಿಸಿ ಕುಟುಂಬಗಳು ಆರ್ಥಿಕವಾಗಿ ತೊಂದರೆಗೀಡಾಗುವ ಪ್ರಕರಣಗಳನ್ನು ತೊಡೆದು ಹಾಕಲು ಜಿಲ್ಲಾಡಳಿತದ ಬೆಂಬಲದಡಿ ಈ ಸೌಲಭ್ಯ ಜಿಲ್ಲೆಯ ಸಾರ್ವಜನಿಕರಿಗೆ ಕಡುಬಡವರಿಗೆ ಆಶಾದೀಪವಾಗಿದೆ. ಹೆರಿಗೆ ಅವಧಿಯಲ್ಲಿ ಕಂಡು ಬರಬಹುದಾದ ಸಂಭವನಿಯ ತೊಂದರೆಗಳನ್ನು ವೈದ್ಯರ ನಿಗಾವಣೆ ಮೂಲಕ ಗುರ್ತಿಸಿ ಸುರಕ್ಷಿತ ಹೆರಿಗೆ ಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ತೀವ್ರ ರಕ್ತಹೀನತೆಯಂತಹ ಸನ್ನಿವೇಶದಲ್ಲಿ ಕ್ಷೇತ್ರ ಮಟ್ಟದಲ್ಲಿ ಸ್ಥಳೀಯವಾಗಿ ನೀಡುವ ಚಿಕಿತ್ಸೆಯಾದ ಸುಧಾರಣೆಯಾಗದಿದ್ದಲ್ಲಿ ತಜ್ಞರ ಬಳಿ ತಪ್ಪದೇ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಸ್ಕ್ಯಾನ್ ಮಾಡಿಸುವುದು. ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ ಪುನಃ ಗರ್ಭಿಣಿಯಾಗುವ ಅವಧಿಯನ್ನು ಕನಿಷ್ಟ 3 ವರ್ಷಕ್ಕೆ ಕಡ್ಡಾಯವಾಗಿ ಮುಂದೂಡಬೇಕು. ಅಲ್ಲದೇ, ಗಾಳಿ ಸುದ್ದಿ ಮೂಲಕ ಕಬ್ಬಿಣಾಂಶ ಮಾತ್ರೆ ನುಂಗಿದರೆ, ಭ್ರೂಣ ದಪ್ಪವಾಗುತ್ತದೆ, ಕಪ್ಪು ಬಣ್ಣದ ಮಗು ಹುಟ್ಟುತ್ತದೆ ಎಂಬ ತಪ್ಪು ನಂಬಿಕೆ ನಂಬಬಾರದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net