ಹೃದಯ ಆರೈಕೆಗೆ ಆದ್ಯತೆ ನೀಡಿ

Published on

ಬಳ್ಳಾರಿ : ಮನುಷ್ಯನ ಆವಯವಗಳಲ್ಲಿ ಹೃದಯದ ಪಾತ್ರ ಅತ್ಯಂತ ಪ್ರಮುಖವಾಗಿದೆ. ಹೃದಯದ ಆರೈಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸದೃಢ ಆರೋಗ್ಯ ಹೊಂದಬೇಕು ಎಂದು ಹಿರಿಯ ಹೃದಯ ತಜ್ಞ ಡಾ.ಎಸ್.ಎಸ್ ಅಯ್ಯಂಗಾರ್ ತಿಳಿಸಿದರು.

ಇಲ್ಲಿನ ಡಿಎಚ್ಒ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲೊಂದಾದ ಡಾ.ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯ ಅಂಗವಾಗಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ವಿಭಾಗದೊಂದಿಗೆ ಹೃದಯ ಕಾಯಿಲೆ ಆರಂಭದಲ್ಲಿಯೇ ಗುರುತಿಸಲು ಬಳ್ಳಾರಿ ಹಬ್ ಒಳಗೊಂಡಂತೆ ಸಿರಗುಪ್ಪ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೊಸಪೇಟೆ, ಕುಷ್ಟಗಿ, ಯಲಬುರ್ಗಾ ಸಾರ್ವಜನಿಕ ಆಸ್ಪತ್ರೆಗಳ ತಜ್ಞ ವೈದ್ಯರು ಹಾಗೂ ಸಿಬ್ಬಂದಿಗೆ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೃದಯ ಸಂಬಂಧಿತ ಯಾವುದೇ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯಕೀಯ ಉಪಚಾರ ಪಡೆಯಬೇಕು. ಆರೋಗ್ಯವಂತ ಹೃದಯ ಕಾಪಾಡಿಕೊಂಡು ದೀರ್ಘಾಯುಷ್ಯ ಹೊಂದಲು ಜನತೆಗೆ ಕಾಳಜಿ ತೆಗೆದುಕೊಳ್ಳುವುದರ ಕುರಿತು ಜಾಗ್ರತೆ ನೀಡಬೇಕು ಎಂದರು.

ಹೃದಯ ಸಂಬಂಧಿತ ಕಾಯಿಲೆಗಳ ಲಕ್ಷಣಗಳಾಗಿರುವ ನಿದ್ರಾಭಂಗ, ತೀವ್ರ ಉಸಿರಾಟದ ತೊಂದರೆ, ಬೆನ್ನು ಅಥವಾ ದೇಹದ ಮೇಲ್ಭಾಗದಲ್ಲಿ ಅಸ್ವಸ್ಥತೆ ಎಡಗೈ ಸೇದುವುದು, ಕಾರಣವಿಲ್ಲದೆ ಬೆವುರುವುದು, ವಾಕರಿಕೆ, ವಾಂತಿ ಮುಂತಾದವು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳಿಗೆ ಆಸ್ಪತ್ರೆಗೆ ದಾಖಲಿಸುವ ಕುರಿತು ತಿಳಿ ಹೇಳಬೇಕು. ಬಳ್ಳಾರಿ ಹೃದಯಾಲಯ ಹಬ್ ಆಸ್ಪತ್ರೆಗೆ ತಕ್ಷಣವೇ ವೈದ್ಯಕೀಯ ಉಪಚಾರದೊಂದಿಗೆ ಕಳುಹಿಸುವ ಕಾರ್ಯ ಮಾಡಬೇಕು ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿ.ಕೆ.ಮರಿಯಂಬಿ ಮಾತನಾಡಿ, ಡಾ.ಪುನೀತ್ ರಾಜ್‌ಕುಮಾರ್ ಹೃದಯ ಜ್ಯೋತಿ ಯೋಜನೆಯಡಿ ಜಿಲ್ಲೆಯ ಸಿರುಗುಪ್ಪ ಸಾರ್ವಜನಿಕ ಆಸ್ಪತ್ರೆ ಆಯ್ಕೆಯಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯ ಸರ್ಕಾರವು ಇತರೆ ತಾಲೂಕಗಳನ್ನು ಒಳಪಡಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಹಿರಿಯ ಹೃದಯ ತಜ್ಞರಾದ ಡಾ.ಸಿ.ಬಿ ಪಾಟೀಲ್, ಡಾ.ಮಧು ಜುಮ್ಲಾ ತರಬೇತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net