ಬಳ್ಳಾರಿ : ಸಾಮಾನ್ಯ ಮಕ್ಕಳಂತೆ ವಿಶೇಷ ಚೇತನ ಮಕ್ಕಳೂ ಕೂಡ ಕ್ರೀಡಾಕೂಟಗಳಲ್ಲಿ ಉತ್ಸಾಹದಿಂದ ಭಾಗವಹಿಸುವಂತೆ ನಾವೆಲ್ಲರೂ ಸದಾವಕಾಶ ಕಲ್ಪಿಸಿಕೊಡಬೇಕು ಎಂದು ಎಡಿಸಿ ಮಹಮ್ಮದ್ ಎನ್. ಝಬೇರ್ ಹೇಳಿದರು.
ನಗರದ ವಿಮ್ಸ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಶೇಷಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಹಾಗೂ ಸಂಘ ಸಂಸ್ಥೆಗಳು ಸಹಯೋಗದೊಂದಿಗೆ ವಿಶ್ವ ವಿಶೇಷಚೇತನರ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಹೊಸಮನೆ ಮಾತನಾಡಿ, ವಿಶೇಷಚೇತನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ವಿಶೇಷ ಪ್ರೋತ್ಸಾಹ ನೀಡುವುದರ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸಬೇಕು. ಕ್ರೀಡೆಗಳಲ್ಲಿ ಸೋಲು-ಗೆಲುವು ಸಾಮಾನ್ಯ, ಸೋಲು ಗೆಲುವಿನ ಮೆಟ್ಟಿಲು ಎಂದು ಕ್ರೀಡಾ ಪಟುಗಳಿಗೆ ಎಂದು ಕಿವಿ ಮಾತು ಹೇಳಿದರು.
ಕ್ರೀಡಾ ಕೂಟದಲ್ಲಿ ಭಾಗವಹಿಸಿದ ಎಲ್ಲ ವಿಶೇಷ ಚೇತನರಿಗೆ ಕ್ಯಾಪ್ ಮತ್ತು ಟೀ-ಶರ್ಟ್ ವಿತರಿಸಲಾಯಿತು. ಕ್ರಿಕೆಟ್, ಗುಂಡು ಎಸೆತ, ರನ್ನಿಂಗ್ ರೇಸ್, ಬೈಕ್ ರೇಸ್, ಕೇನ್ ರೇಸ್, ಜಾವಲಿನ್ ಥ್ರೋ, ಮ್ಯೂಜಿಕಲ್ ಚೇರ್, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಜಾನಪದ ಗೀತೆ, ಭಾವಗೀತೆ, ಫ್ಯಾನ್ಸಿ ಡ್ರೆಸ್, ಚಿತ್ರಕಲೆ ಸೇರಿದಂತೆ ಸ್ಪರ್ಧೆಗಳು ಆಯೋಜಿಸಲಾಗಿತ್ತು. ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಸುಮಾರು 500 ಕ್ಕೂ ಜನ ವಿಶೇಷಚೇತನರು ಭಾಗವಹಿಸಿದ್ದರು.