ಬಳ್ಳಾರಿ : ಸಂಡೂರು ಕ್ಷೇತ್ರದಲ್ಲಿ ನಿರಂತರವಾಗಿ ಕಾಂಗ್ರೆಸ್ ಗೆಲ್ಲಲು ಶಕ್ತಿಯಾಗಿರುವುದು ಅಂದಿನಿಂದ ಇಂದಿನವರೆಗೆ ಇಬ್ಬರು ನಾಯಕರು ಎಂಬ ಚರ್ಚೆ ಜೋರಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಸಂಡೂರು ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಅಂದು ರಾಜಮನೆತನದ ಎಂ.ವೈ.ಘೋರ್ಪಡೆ ಈ ಕ್ಷೇತ್ರದಲ್ಲಿ ಸತತ ಎರಡು ಬಾರಿ ಹ್ಯಾಟ್ರಿಕ್ ಗೆದಿದ್ದು ಹಾಗೂ ಒಂದು ಬಾರಿ ಅವಿರೋಧವಾಗಿ ಆಯ್ಕೆ ಆಗಿದ್ದರು. ಅಲ್ಲದೆ ರಾಯಚೂರಿನಿಂದ ಸಂಸದರಾಗಿ ಪ್ರತಿನಿಧಿಸಿದ್ದಾರೆ. ಸಂಡೂರಿನಲ್ಲಿ ಘೋರ್ಪಡೆ ಹಾಗೂ ಕುಟುಂಬದವರು ತಮ್ಮದೆ ವರ್ಚಸ್ಸು ಮೂಲಕ ಜನ ಮನ್ನಣೆಗಳಿಸಿ ಗೆಲುವು ಸಾಧಿಸಿದ್ದಾರೆ. ವಿವಿಧ ಪಕ್ಷಗಳ ಮೂಲಕ ಹಲವು ರಾಜ್ಯ ಹಾಗೂ ಸ್ಥಳಿಯ ನಾಯಕರು ಘೋರ್ಪಡೆ ವಿರುದ್ಧ ಸ್ಪರ್ಧಿಸಿ ಪರಾಭಾವಗೊಂಡಿದ್ದಾರೆ.
ಸ್ಥಳಿಯರಿಗೆ ಮಾನ್ಯತೆ ನೀಡಿದ ಕುಟುಂಬ : ರಾಜ್ಯದಲ್ಲಿ ಮೈಸೂರು ಸಂಸ್ಥಾನ ರಾಜರು ಸ್ಥಳಿಯರಿಗೆ ಒತ್ತು ನೀಡುತ್ತಿದ್ದರು. ಅದರಂತೆ, ಎಂ.ವೈ.ಘೋರ್ಪಡೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶದಿಂದ ಕ್ಷೇತ್ರದಲ್ಲಿಯೇ ಕೈ ಮಗ್ಗ ಕರ ಕುಶಲ ಕೇಂದ್ರ ಆರಂಭಿಸಿ ಗೃಹಿಣಿಯರಿಗೆ ಅವಕಾಶ ನೀಡಿದರು. ಈ ಕೇಂದ್ರದಿಂದ ತಯಾರಿಸಿದ ಲಂಬಾಣಿ ಸಾಂಪ್ರಾದಾಯಿಕ ಉಡುಗೆಗೆ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ಹಲವು ವರ್ಷಗಳಿಂದ ಪಟ್ಟಣದ ಕುಮಾರಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ನಿಬಂರ್ಧ ಹೇರಿತ್ತು. ಘೋರ್ಪಡೆ ಕುಟುಂಬದವರು ಮಹಿಳೆಯರು ಪ್ರವೇಶಿಸಲು ಅನುಮತಿ ನೀಡಿ ಸಮಾನತೆ ಸಾರಿದರು. ಸ್ಥಳೀಯವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದರು. ಇಂದಿಗೂ ಅವರು ಆರಂಭಿಸಿದ ಕಂಪನಿಗಳಲ್ಲಿ ಹಲವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರಮುಖವಾಗಿ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಪ್ರತಿಯೊಂದು ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ ಶ್ರಮಿಸಿದವರು. ಘೋರ್ಪಡೆ ದೂರದೃಷ್ಠಿ ಅಲೋಚನೆ ಉಳ್ಳವರು ಆಗಿದ್ದರಿಂದ ಸತತ ಏಳು ಬಾರಿ ಹಾಗೂ ನಿರಂತರವಾಗಿ ಕಾಂಗ್ರೆಸ್ ಗೆದ್ದಿದೆ ಎನ್ನಬಹುದು.
ಲಾಡ್ ಪ್ರಾಬಲ್ಯ : 2004ರಲ್ಲಿ ಸಂತೋಷ ಲಾಡ್ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಘೋರ್ಪಡೆ ಕುಟುಂಬದವರನ್ನು ಸೋಲಿಸುವ ಮೂಲಕ ಕ್ಷೇತ್ರದಲ್ಲಿ ಹೊಸದೊಂದು ಇತಿಹಾಸ ಬರೆದರು. ಪ್ರತಿ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಇಂದಿಗೂ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಲಾಡ್ ಗಳಿಸಿದ್ದಾರೆ. 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾಗಿದ್ದರಿಂದ ಕ್ಷೇತ್ರ ತೊರೆಯುವ ಅನಿವಾರ್ಯತೆ ಎದುರಾಯಿತು. ಕಳೆದ ಎರಡು ದಶಕಗಳಿಂದ ಕ್ಷೇತ್ರದ ಹಲವು ಸಮಸ್ಯೆಗಳು ಲಾಡ್‌ಗೆ ತಲುಪಿವೆ. ಪ್ರತಿಯೊಂದು ಗ್ರಾಮಗಳ ನಾಯಕರ ಜತೆಯಲ್ಲಿ ಸಂಪರ್ಕದಲ್ಲಿದ್ದಾರೆ. ಈ ಉಪಚುನಾವಣೆಗೆ ಟಿಕೆಟ್ ಗೊಂದಲವಿದ್ದ ವೇಳೆ ಸ್ವತಃ ಲಾಡ್ ಹೊಣೆ ಹೊತ್ತು ತುಕಾರಾಮ್ ಪತ್ನಿ ಟಿಕೆಟ್ ಕೊಡಿಸಿ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ಹೊತ್ತಿದ್ದಾರೆ. ರಾಜ್ಯದಲ್ಲಿ 2008 ವಿಧಾನಸಭಾ ಚುನಾವಣೆಯಲ್ಲಿ ಅಖಂಡ ಜಿಲ್ಲೆಯ ಒಂಬತ್ತು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದಿದ್ದರು. ಅಲ್ಲದೆ, ರೆಡ್ಡಿ ಸಹೋದರರ ಪ್ರಾಬಲ್ಯದಲ್ಲಿ ಸಂಡೂರು ಕೂಡ ಬಿಜೆಪಿ ವಶವಾಗಲಿದೆ ಎಂಬ ಚರ್ಚೆ ಜೋರಾಗಿ ನಡೆದಿತ್ತು. ರೆಡ್ಡಿ ಸಹೋದರರು ಎಲ್ಲರೂ ಸೇರಿ ಲಾಡ್ ವಶದಲ್ಲಿರುವ ಕ್ಷೇತ್ರವನ್ನು ಗೆಲ್ಲಲು ಹರಸಾಹಸ ಪಟ್ಟು ಪರಭಾವಗೊಂಡರು.