ಮುಂಜಾಗ್ರತೆಯಾಗಿ ಶ್ರವಣ ಪರೀಕ್ಷೆಗೆ ಒಳಪಡಿಸಿ

Published on

ಬಳ್ಳಾರಿ: ಜನನದ ನಂತರ ಎಲ್ಲ ನವಜಾತ ಶಿಶುಗಳಿಗೆ ತಿಂಗಳಲ್ಲಿ ಎರಡು ಬಾರಿ ಕಡ್ಡಾಯವಾಗಿ ಶ್ರವಣ ಪರೀಕ್ಷೆ ಮಾಡಿಸಬೇಕು. ಈ ಮೂಲಕ ಆರಂಭದಲ್ಲಿಯೇ ಶ್ರವಣದೋಷದ ಚಿಕಿತ್ಸೆಗೆ ಸಹಕಾರಿಯಾಗುತ್ತದೆ ಎಂದು ಡಿಎಚ್‌ಒ ಡಾ.ವೈ. ರಮೇಶಬಾಬು ಹೇಳಿದರು.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಹಾಗೂ ಕಿವಿ, ಮೂಗು, ಗಂಟಲು ವಿಭಾಗ ಇವರ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಶ್ರವಣ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭವಿಷ್ಯದಲ್ಲಿ ಮಗು ಶ್ರವಣ ತೊಂದರೆಯಿಂದ ಹೊರಬರಲು ಜನನ ನಂತರದಲ್ಲಿ ತಿಂಗಳಿಗೊಮ್ಮೆ ಕಡ್ಡಾಯವಾಗಿ ತಪಾಸಣೆ ಮಾಡಿಸಬೇಕು. ಜಿಲ್ಲಾಸ್ಪತ್ರೆಯಲ್ಲಿ ಶ್ರವಣದೋಷದ ಚಿಕಿತ್ಸೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈಗಾಗಲೇ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ 14 ಜನರಿಗೆ ಕನಿಷ್ಠ 10 ಲಕ್ಷ ರೂ. ವೆಚ್ಚದ ಕಾಕ್ಲಿಯರ್ ಇನ್‌ಪ್ಲಾಂಟ್, 400 ಜನರಿಗೆ ಶ್ರವಣಸಾಧನ, 5240 ನವಜಾತ ಶಿಶುಗಳ ಶ್ರವಣ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದರು.

ನವಜಾತ ಶಿಶುಗಳಲ್ಲಿ ಸಾಮಾನ್ಯವಾಗಿ ಕೌಟಿಂಬಿಕ ಹಿನ್ನೆಲೆ, ಗರ್ಭಾವಸ್ಥೆಯಲ್ಲಿನ ಸೋಂಕು, ದಿನ ತುಂಬುವ ಮುನ್ನ ಜನಸಿದ್ದು, ಜನನದ ಸಮಯದಲ್ಲಿ ಆಮ್ಲಜನಕದ ಕೊರತೆ, ಜನನದ ನಂತರ ತೀವ್ರ ಕಾಮಾಲೆಯಿಂದ ಕಿವುಡುತನ ಕಂಡುಬರುತ್ತದೆ.

ಹಿರಿಯ ನಾಗರಿಕರಲ್ಲಿ ಸಾಮಾನ್ಯ ವಯಸ್ಸಾದ ಪ್ರಕ್ರಿಯೆ, ಯಾವುದೇ ಸನ್ನಿವೇಶದಲ್ಲಿ ಜೋರಾದ ಶಬ್ಧಗಳಿಗೆ ಒಳಗೊಳ್ಳುವುದು, ತೀವ್ರ ರಕ್ತದೊತ್ತಡ, ಮಧುಮೇಹ, ಕೆಲವು ಔಷಧಿಗಳನ್ನು ಬಳಸುವುದರಿಂದ ಕಿವುಡುತನ ಉಂಟಾಗುತ್ತದೆ ಎಂದರು.

ಜಿಲ್ಲಾ ಶಸ್ತಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ಮಕ್ಕಳು ಮತ್ತು ವಯಸ್ಕರು ಒಳಗೊಂಡು ಕಿವಿಯೊಳಗೆ ಯಾವುದೇ ವಸ್ತುಗಳನ್ನು ಹಾಕಬಾರದು, ಗದ್ದಲದ ಸ್ಥಳಗಳಲ್ಲಿ ಕಿವಿ ಕವಚ ಬಳಸಬೇಕು, ಕಿವಿಯಲ್ಲಿ ತೊಂದರೆ ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ತೆಗೆದುಕೊಳ್ಳುವ ಔಷಧಿಗಳು ಕಿವಿಯ ಮೇಲೆ ಪರಿಣಾಮ ಬೀಳುವುದೇ ಎಂಬುದರ ಕುರಿತು ವೈದ್ಯರಿಂದ ಖಚಿತಪಡಿಸಿಕೊಳ್ಳಬೇಕು. ನಿಯಮಿತವಾಗಿ ಕಿವಿಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಚಿಸಿದ ಶ್ರವಣ ಯಂತ್ರಗಳನ್ನೇ ಬಳಸಬೇಕು ಎಂದು ಸಲಹೆ ನೀಡಿದರು.

ಬಳಿಕ ಕಾರ್ಯಕ್ರಮದಲ್ಲಿ ಶ್ರವಣದೋಷದಿಂದ ಬಳಲುತ್ತಿದ್ದ ಮಕ್ಕಳಿಗೆ ಶ್ರವಣ ಸಾಧನಗಳನ್ನು ಅಳವಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net