ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ

Published on

ಬಳ್ಳಾರಿ; ಜಿಲ್ಲೆಯಲ್ಲಿ ಮೇ 26 ರಿಂದ 31 ರವರೆಗೆ ಒಂದು ವಾರ ವಿಶೇಷ ಲಸಿಕಾ ಅಭಿಯಾನ ನಡೆಯುತ್ತಿದ್ದು, ಬಾಲ್ಯದಲ್ಲಿ ಬರಬಹುದಾದಂತಹ 12 ಮಾರಕ ರೋಗಗಳನ್ನು ತಡೆಗಟ್ಟಲು ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಕರೆ ನೀಡಿದರು.

ನಗರದ ಶೇಷಾವಲಿ ದರ್ಗಾ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ವಿಶೇಷ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು. ಈಗಾಗಲೇ ಪ್ರತಿ ಗುರುವಾರ ಗ್ರಾಮ ಹಾಗೂ ವಾರ್ಡ್ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ದಿನ ಲಸಿಕೆ ಹಾಕಲಾಗುತ್ತಿದೆ. ಮಗು ಲಸಿಕೆ ವಂಚಿತರಾಗಬಾರದೆಂಬ ಹಿನ್ನೆಲೆಯಲ್ಲಿ ಸರ್ಕಾರವು ಏಪ್ರಿಲ್, ಮೇ, ಜೂನ್ ಮೂರು ತಿಂಗಳ ಕಾಲ ನಿಗದಿತ ಅವಧಿಯಲ್ಲಿ ಲಸಿಕೆ ಪಡೆಯದ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕುವ ಕಾರ್ಯವನ್ನು ಮೇ 26 ರಿಂದ 31 ರ ವರೆಗೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತಿರುವ ದಡಾರ ಪ್ರಕರಣಗಳ ನಿಯಂತ್ರಣಕ್ಕಾಗಿ ಮಗುವಿನ ವಯಸ್ಸು 9 ತಿಂಗಳು ತುಂಬಿದ ನಂತರ ಹಾಗೂ ಒಂದೂವರೆ ವರ್ಷ ವಯಸ್ಸಿನಲ್ಲಿ ಎರಡು ಬಾರಿ ಲಸಿಕೆ ಹಾಕಿಸುವ ಮೂಲಕ ದಡಾರ ತಡೆಗಟ್ಟಬಹುದು ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ ಮಾತನಾಡಿ, ಲಸಿಕೆ ನೀಡುವಲ್ಲಿ ಸಾರ್ವಜನಿಕರ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಕ್ರೂಡಿಕರಿಸಿ ತಪ್ಪು ನಂಬಿಕೆಗಳ ಕುರಿತು ಜಾಗೃತಿ ನೀಡಲಾಗುತ್ತಿದೆ. ಗಾಳಿಸುದ್ದಿ ನಂಬಿ ಲಸಿಕೆ ಬೇಡವೆನ್ನುವವರಿಗೆ ವ್ಯಾಪಕವಾಗಿ ಮನೆ ಭೇಟಿ ಮೂಲಕ ಗುಂಪು ಸಭೆ, ಸಮುದಾಯ ಮುಖಂಡರ ಮೂಲಕ ಮಾಹಿತಿ ಒದಗಿಸಿ ಅವರಲ್ಲಿಯ ತಪ್ಪು ನಂಬಿಕೆ ಹೋಗಲಾಡಿಸಿ ಲಸಿಕೆಗಳನ್ನು ಹಾಕಿಸಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net