ಶಿಶು ಸದೃಡ ಆರೋಗ್ಯಕ್ಕಾಗಿ ಲಸಿಕೆ ಹಾಕಿಸಿ

Published on

ಬಳ್ಳಾರಿ : ಬಾಲ್ಯದಲ್ಲಿ ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುವ 12 ಮಾರಕ ರೋಗಗಳನ್ನು ತಡೆಯಲು ಸರ್ಕಾರಿ ಆಸ್ಪತ್ರೆಗಳಲ್ಲಿ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಡಿಎಚ್‌ಒ ಡಾ.ವೈ.ರಮೇಶಬಾಬು ಹೇಳಿದರು.

ಕುರುಗೋಡು ತಾಲೂಕಿನ ಕೋಳೂರು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಪೋಲಿಯೋ ರೋಗಕ್ಕೆ ಪೋಲಿಯೋ ದ್ರಾವಣ, ಬಾಲಕ್ಷಯಕ್ಕೆ ಬಿಸಿಜಿ ಲಸಿಕೆ, ಕಾಮಾಲೆ ರೋಗಕ್ಕೆ ಹೆಪಟೈಟಿಸ್ ಚುಚ್ಚುಮದ್ದು, ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಗ ತಡೆಗೆ ಲಸಿಕೆಗಳು, ಅತಿಸಾರ ಭೇದಿ ತಡೆಗೆ ರೋಟಾ ವೈರಸ್, ಶ್ವಾಸಕೋಶದ ಸೋಂಕು (ನ್ಯೂಮೋನಿಯಾ) ತಡಗೆ ಎಚ್‌ಇನ್‌ಪ್ಲ್ಯುಯೆಂಜಾ, ಕಾಮಾಲೆ ತಡೆಗಾಗಿ ಹೆಪಟೈಟಿಸ್-ಬಿ ಒಳಗೊಂಡ ಪೆಂಟಾವೈಲೆಅಟ್ ಲಸಿಕೆ ಹಾಗೂ ರಕ್ತದ ಸೋಂಕು ತಡೆಗೆ ನಿಮೋಕಾಕಲ್ ಲಸಿಕೆ, ಮೆದುಳು ಜ್ವರ ರೋಗ ತಡೆಗೆ ಜಾಪನೀಸ್ ಎನ್ಸ್ಪಲಿಟಿಸ್ ಲಸಿಕೆ, ದಡಾರ ರೂಬೇಲ್ಲಾ ರೋಗಕ್ಕೆ ಮಿಸಲ್ಸ್ ರೂಬೆಲ್ಲಾ ಲಸಿಕೆ, ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್-ಎ ಅನ್ನಾಂಗ ದ್ರಾವಣ ನೀಡಲಾಗುತ್ತದೆ. ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು ಎಂದರು.

ಕೆಲವು ರೋಗಗಳಿಗೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರಕ್ಕೆ ಮಗುವಿನ 16 ರಿಂದ 23 ತಿಂಗಳು ವಯಸ್ಸಿನ ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು. 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು. ಈ ಹಿನ್ನಲೆಯಲ್ಲಿ ಯಾವುದೇ ಗಾಳಿಸುದ್ದಿಗಳನ್ನು ನಂಬದೆ ಎಲ್ಲ ಲಸಿಕೆಗಳನ್ನು ಹಾಕಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net