ಅಗತ್ಯ ಮಾಹಿತಿಯೊಂದಿಗೆ ಸಿದ್ಧಗೊಳ್ಳಿ

Published on

ಬಳ್ಳಾರಿ : ಜ.16, 17 ಮತ್ತು 18 ರಂದು ಜಿಲ್ಲೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಭೇಟಿ ನೀಡಲಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆಗೆ ಸಲ್ಲಿಸಿದ ಲೋಕಾಯುಕ್ತ ದೂರುಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯೊಂದಿಗೆ ಸಿದ್ಧರಿರುವಂತೆ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಸೂಚಿಸಿದರು.

ಇಲ್ಲಿನ ಹೊಸ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಜ.18 ರಂದು ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತ್ಯಾ ವಿಚಾರಣೆ ನಡೆಸುತ್ತಾರೆ. ಹಾಗಾಗಿ ದೂರುದಾರರು ಮತ್ತು ಎದುರುದಾರರು ನಿಗದಿತ ಸಮಯದಲ್ಲಿ ಹಾಜರಿರಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರು ದೂರುದಾರಿಗೆ ಈ ಕುರಿತು ಮಾಹಿತಿ ನೀಡಿ, ವಿಚಾರಣೆಗೆ ಹಾಜರಾಗಬೇಕು. ಜ.17 ರಂದು ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮತ್ತು ವಿಚಾರಣೆ ನಡೆಸುವರು. ಆದ್ದರಿಂದ ಎಲ್ಲ ಅಧಿಕಾರಿಗಳು ತಪ್ಪದೇ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಆದೇಶಿಸಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಜ.16 ರಂದು ಉಪಲೋಕಾಯುಕ್ತರು ಜಿಲ್ಲೆಯ ಹಾಸ್ಟೆಲ್, ಕಚೇರಿಗಳು, ಅಂಗನವಾಡಿ ಕೇಂದ್ರ, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ನಡೆಸುವರು. ಎಲ್ಲ ಇಲಾಖೆಯ ಅಧಿಕಾರಿಗಳು ಕಚೇರಿ ಹಾಗೂ ಆವರಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net