ಸೌಲಭ್ಯ ಪಡೆದು ಆರ್ಥಿಕ ಸಬಲರಾಗಿ

Published on

ಬಳ್ಳಾರಿ : ಮಹಿಳೆಯರು ಸರ್ಕಾರದ ಹಲವಾರು ಯೋಜನೆ ಮತ್ತು ಸೌಲಭ್ಯ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಸಲಹೆ ನೀಡಿದರು.

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಬೇಟಿ ಬಚಾವೋ ಬೇಟಿ ಪಡಾವೋ ಅಭಿಯಾನದಡಿ ಅಂತರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಹೆಣ್ಣುಮಕ್ಕಳ ಜನ್ಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಬಾಲ್ಯವಿವಾಹ, ಹೆಣ್ಣು ಭ್ರೂಣ ಹತ್ಯೆ, ಲೈಂಗಿಕ ಶೋಷಣೆ, ಲಿಂಗ ತಾರತಮ್ಯ ಸೇರಿದಂತೆ ಇನ್ನಿತರೆ ದೌರ್ಜನ್ಯಗಳು ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿವೆ. ಇವುಗಳನ್ನು ಪ್ರೋತ್ಸಾಹಿಸದೇ ನಾವೆಲ್ಲರೂ ಒಗ್ಗೂಡಿ ತಡೆಗಟ್ಟಬೇಕಿದೆ ಎಂದರು.

ಸಮಾಜದಲ್ಲಿ ಹೆಣ್ಣು-ಗಂಡು ಎರಡು ಕಣ್ಣುಗಳಿದ್ದಂತೆ, ಇತ್ತೀಚಿನ ದಿನಗಳಲ್ಲಿ ಎಲ್ಲ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಸಾಧನೆಗೈತ್ತಿರುವುದು ಸಂತಸದ ವಿಷಯವಾಗಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಎಂಬ ಕಾರ್ಯಾಚರಣೆಯನ್ನೂ ಹೆಣ್ಣುಮಕ್ಕಳು ನಿರ್ವಹಿಸಿರುವುದು ಹೆಮ್ಮಯ ವಿಚಾರ. ಸಮಾಜದಲ್ಲಿ ಅವರಿಗೆ ಶಿಕ್ಷಣ, ಸಮಾನತೆ, ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಂ.ರಾಮಕೃಷ್ಣ ನಾಯಕ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾನವಾದ ಶಿಕ್ಷಣದ ಅವಕಾಶ ಒದಗಿಸಬೇಕಿದೆ. ಕುಸಿಯುತ್ತಿರುವ ಮಕ್ಕಳ ಲಿಂಗಾನುಪಾತದ ಸಮಸ್ಯೆಯನ್ನು ನಿವಾರಿಸಬೇಕಿದೆ. ಹೆಣ್ಣು ಮಕ್ಕಳ ಸಬಲೀಕರಣ ಮತ್ತು ಅವರ ಹಕ್ಕುಗಳನ್ನು ಉತ್ತೇಜಿಸುವುದು. ಹೆಣ್ಣು ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು. ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಉಳಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಜಿಲ್ಲಾ ಸರ್ಜನ್ ಡಾ.ಎನ್.ಬಸರೆಡ್ಡಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಇತ್ತೀಚಿನ ನಾಲ್ಕೈದು ದಿನದಲ್ಲಿ ಹೆರಿಗೆ ವಿಭಾಗದಲ್ಲಿ ಹೆಣ್ಣು ಮಗುವಿನ ಜನನ ಅಧಿಕವಾಗಿದ್ದು, ಅ.17 ರಿಂದ 23 ರ ವರೆಗೆ ಸಂಭವಿಸಿದ 79 ಹೆರಿಗೆಯಲ್ಲಿ 50 ಹೆಣ್ಣು ಮತ್ತು 29 ಗಂಡು ಮಗು ಜನಿಸಿವೆ ಎಂದು ಮಾಹಿತಿ ನೀಡಿದರು.

ಮಿಷನ್‌ಶಕ್ತಿ ಯೋಜನೆ ಮತ್ತು ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಭಿತ್ತಿ ಪತ್ರ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಆಕರ್ಷಕ ಮಗುವಿನ ತೊಟ್ಟಿಲನ್ನು ಏರ್ಪಡಿಸಲಾಗಿತ್ತು. ತಾಯಂದಿರು ತಮ್ಮ ಮಗುವನ್ನು ತೊಟ್ಟಿಲಲ್ಲಿ ಹಾಕಿ ಸಂಭ್ರಮಿಸಿದರು. ತಾಯಂದಿರಿಗೆ ಮಕ್ಕಳ ಕಿಟ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net