ಮಳೆಗಾಲ ಎದುರಿಸಲು ಕಾರ್ಯಪ್ರವೃತ್ತರಾಗಿ

Published on

ಬಳ್ಳಾರಿ : ಜಿಲ್ಲೆ ಹಾಗೂ ನಗರ ವ್ಯಾಪ್ತಿಯಲ್ಲಿ ಕುಡಿವ ನೀರಿನ ಮೂಲಗಳು ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.

ಇಲ್ಲಿನ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾದಿಕಾರ ಸಮಿತಿ ಸಭೆಯಲ್ಲಿ ಮಾತನಾಡಿದರು. ರಾಜ್ಯದ ವಿವಿಧಡೆ ಮಳೆ ಸುರಿಯುತ್ತಿದ್ದು ಕೊಳಚೆ ನೀರು ಕುಡಿವ ನೀರಿಗೆ ಸೇರದಂತೆ ನಿಗಾವಹಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ, ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳಬೇಕು. ಜಲಾಶಯದಿಂದ ನದಿ ನೀರಿಗೆ ಹರಿಸುವ ಸಂಭವವಿದ್ದು ,ನದಿಪಾತ್ರದ ಗ್ರಾಮಗಳಿಗೆ ಎಚ್ಚರಿಕೆ ನೀಡಿ ಹಾಗೂ ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಮಳೆಯಿಂದಾಗಿ ಸಾರ್ವಜನಿಕ ಆಸ್ತಿ, ಮಾನವ, ಜಾನವಾರು ಜೀವ, ಬೆಳೆ ಹಾಗೂ ಮನೆಗಳ ಹಾನಿ ಬಗ್ಗೆ ಗ್ರಾಮಲೆಕ್ಕಿಗರು, ರಾಜಸ್ವ ನಿರೀಕ್ಷಕರಿಂದ ವರದಿ ಪಡೆದು, ತಾಲೂಕುವಾರು ಕ್ರೋಢೀಕರಿಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ನಗರ ಮತ್ತು ಗ್ರಾಮಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ರಾಜ ಕಾಲುವೆ, ಚರಂಡಿ, ಸೇತುವೆ ಹೂಳು ತೆಗೆದು ಸ್ವಚ್ಚಗೊಳಿಸುವುದರ ಸಂಬಂಧ ಕ್ರಮವಹಿಸಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆಗಾಲದಲ್ಲಿ ವಿದ್ಯುತ್ ಸರಬರಾಜು ಮೇಲೆ ಉಂಟಾಗಬಹುದಾದ ವ್ಯತ್ಯಯ ಅಂಶಗಳನ್ನು ಗಮನದಲ್ಲಿರಿಸಿ ವಿದ್ಯುತ್ ಮೂಲ ಸೌಕರ್ಯಗಳನ್ನು ಬಲಪಡಿಸಬೇಕು. ವಿದ್ಯುತ್ ತಂತಿ ಹಾದು ಹೋಗುವ ಮಾರ್ಗಗಳಲ್ಲಿ ಮಳೆ ಗಾಳಿಗೆ ಬೀಳುವಂತಹ ಮರಗಳ ಕೊಂಬೆಗಳನ್ನು ಕತ್ತರಿಸಬೇಕು. ತುರ್ತು ಸಂದರ್ಭಗಳಲ್ಲಿ ಇತರೆ ಎಲ್ಲಾ ಇಲಾಖೆಗಳು ಒಳಗೊಂಡಂತೆ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಯೋಜನೆಯಡಿ ಖರೀದಿಸಲಾಗುತ್ತಿರುವ ಜೋಳ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಯುತ್ತಿರುವುದಾಗಿ ದೂರುಗಳು ಕೇಳಿ ಬರುತ್ತಿದೆ. ರೈತರ ಎಫ್‌ಐಡಿ ಹೆಸರಿನಲ್ಲಿ ವ್ಯಾಪಾರಿಗಳು ಜೋಳ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆ ಬೆಲೆಗಿಂತ ಕನಿಷ್ಠ ಬೆಂಬಲ ಯೋಜನೆಯಡಿಯ ಬೆಲೆಯು ಅಧಿಕವಾಗಿರುವುದರಿಂದ ಹೆಚ್ಚಾಗಿ ಮಾರಾಟವಾಗುತ್ತಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಎಲ್ಲಾ ತಹಸೀಲ್ದಾರರು, ಜೋಳ ಮಾರಾಟಕ್ಕೆ ನೋಂದಣಿ ಮಾಡಿಕೊಂಡ ರೈತರ ಎಫ್‌ಐಡಿಗಳನ್ನು ಮರು ಪರಿಶೀಲಿಸಬೇಕು ಎಂದರು.

ನಗರ ವ್ಯಾಪ್ತಿಯಲ್ಲಿ ಮಳೆಯಿಂದ ಹೆಚ್ಚು ನೀರು ನಿಲ್ಲುವ ಸ್ಥಳಗಳಲ್ಲಿ ನಿರೇತ್ತಲು 3 ಡಿಸೇಲ್ ಮತ್ತು 3 ಎಲೆಕ್ಟಿಕಲ್ ಮಷಿನ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಲಾಗಿದೆ. ನಗರ ವ್ಯಾಪ್ತಿಯ 28 ಕಿ.ಮೀ ವ್ಯಾಪ್ತಿಯ ರಾಜ ಕಾಲುವೆಯಲ್ಲಿ ಈಗಾಗಲೇ 24 ಕಿ.ಮೀ ಸ್ವಚ್ಛಗೊಳಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ಸಭೆಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net