ಜೆಸ್ಕಾಂನಿಂದ ಡಿಜಿಟಲ್ ಮೀಟರ್ ಅಳವಡಿಕೆ

Published on

ಬಳ್ಳಾರಿ ; ಜಿಲ್ಲೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಜೆಸ್ಕಾಂ ಇಲಾಖೆಯೂ ವಿದ್ಯುತ್ ಕಳ್ಳತನ, ಸೋರಿಕೆ ಶಾಶ್ವತವಾಗಿ ಬೇಕ್ ಹಾಕುವ ಉದ್ದೇಶದಿಂದ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿದೆ.

ಇದರಿಂದ ವಿದ್ಯುತ್ ಸೋರಿಕೆಯಿಂದ ಆಗುತ್ತಿರುವ ನಷ್ಟ ಹಾಗೂ ಗ್ರಾಹಕರು ಬಳಸಿರುವ ವಿದ್ಯುತ್ ಮಾಹಿತಿಯನ್ನು ನಿಖರತೆಯಾಗಿ ಅಳೆಯಲು ಅನುಕೂಲವಾಗಲಿದೆ. ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಒಂದಲ್ಲ , ಒಂದು ರೀತಿಯಲ್ಲಿ ವಿದ್ಯುತ್ ಕಳವು ನಡೆಯುತ್ತಿದೆ. ಕೆಲವಡೆ ಮುಖ್ಯ ವಿದ್ಯುತ್ ತಂತಿಯಿಂದಲೇ ಸಂಪರ್ಕ ಪಡೆದು ವಿದ್ಯುತ್ ಕಳ್ಳತನ ಮಾಡಿದರೆ, ಇನ್ನೂ ಕೆಲವಡೆ ಮನೆಯೊಳಗೆ ಹಳೆಯ ಮೆಕ್ಯಾನಿಕಲ್ ಮೀಟರ್‌ಗಳ ಮೂಲಕ ಬೈಪಾಸ್ ಮಾಡಿಕೊಂಡು ವಿದ್ಯುತ್ ಬಳಸುವ ಮೂಲಕ ಮತ್ತು ಹಳೆಯ ಎಲೆಕ್ಟ್ರೋ ಮೆಕ್ಯಾನಿಕಲ್ ಮೀಟರ್‌ಗಳಲ್ಲಿ ವಿದ್ಯುತ್ ಬಳಕೆಯ ದತ್ತಾಂಶವನ್ನು ತಿಳಿಸಲು ತಿರುಗುವ ಡಿಸ್ಕ್‌ನ್ನೇ ನಿಧಾನಗೊಳಿಸುವುದು ಹಾಗೂ ತಡೆಯವುದು ಸೇರಿದಂತೆ ವಿದ್ಯುತ್ ಕಳ್ಳತನವಾಗುತ್ತಿರುವ ದೂರುಗಳು ಕೇಳಿ ಬಂದಿವೆ.

ಆದ್ದರಿಂದ ಜೆಸ್ಕಾಂ ಇಲಾಖೆಯು ಪ್ರತಿ ತಿಂಗಳು ಭಾರಿ ಪ್ರಮಾಣದಲ್ಲಿ ವಿದ್ಯುತ್ ನಷ್ಟ ಅನುಭವಿಸುತ್ತಿದೆ. ಇದರಿಂದ ಹೊರಬರಲು, ವಿದ್ಯುತ್ ಕಳ್ಳತನಕ್ಕೆ ಶಾಶ್ವತವಾಗಿ ತಡೆಯಲು ಮುಂದಾಗಿದ್ದು ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲು ಚಾಲನೆ ನೀಡಿದೆ. ಡಿಜಿಟಲ್ ಮೀಟರ್ ಅಳವಡಿಸಿದ ನಂತರ ಹೊರಗೆ ಕಾಣದಂತೆ ಮನೆಯೊಳಗೆ ಬೈಪಾಸ್ ಮಾಡಿಕೊಳ್ಳಲು ಬರುವುದಿಲ್ಲ. ವೇಗದ ಮೀಟರ್ ನಿಧಾನಗೊಳಿಸಲು ಅಥವಾ ಯತ್ನಿಸಿದಲ್ಲಿ ಮಾಹಿತಿ ತಿಳಿಯುತ್ತಿದೆ. ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರತಿ ತಿಂಗಳಿಗೆ ಶೇ. 14 ಹಾಗೂ ನಗರ ಶೇ. 11 ರಷ್ಟು ಸೇರಿ ಒಟ್ಟು ಶೇ. 25 ರಷ್ಟು ವಿದ್ಯುತ್ ಸೋರಿಕೆಯನ್ನು ತಡೆಯಬಹುದು ಎಂದು ಜೆಸ್ಕಾಂ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದರು.

80 ತಂಡ ಕಾರ್ಯ : ದಶಕಗಳಿಂದ ಇರುವ ಹಳೆಯ ಎಲೆಕ್ಟೋ ಮೆಕ್ಯಾನಿಕಲ್ ಮೀಟರ್‌ಗಳನ್ನು ತೆರವುಗೊಳಿಸಿ, ನೂತನ ಡಿಜಿಟಿಲ್ ಅಥವಾ ಸ್ಟಾಟಿಸ್ಟಿಕಲ್ ಮೀಟರ್‌ಗಳ ಅಳವಡಿಸುವ ಕಾರ್ಯ ನಗರ ಸೇರಿ ಜಿಲ್ಲಾದ್ಯಂತ ವೇಗ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಈಗಾಗಲೇ ಮೊದಲ ಹಂತದಲ್ಲಿ 2.43 ಲಕ್ಷ ಡಿಜಿಟಲ್ ಮೀಟರ್‌ಗಳನ್ನು ಅಳವಡಿಸಲಾಗಿದ್ದು ಇನ್ನೂ ಎರಡನೇ ಹಂತದಲ್ಲಿ 38,700 ಡಿಜಿಟಲ್ ಮೀಟರ್‌ಗಳು ಅಳವಡಿಸಲು ಬಾಕಿ ಉಳಿದಿವೆ. ಇದರಲ್ಲಿ ಸದ್ಯ 20 ಮೀಟರ್ ಅಳವಡಿಸಲಾಗಿದೆ. ಇದಕ್ಕಾಗಿ ಜಿಲ್ಲಾದ್ಯಂತ 80 ತಂಡಗಳು ಕಾರ್ಯ ನಿರ್ವಹಿಸುತ್ತಿವೆ. ಆಯಾ ಪ್ರದೇಶಗಳ ಸೆಕ್ಷನ್ ಅಧಿಕಾರಿ, ಲೈನ್‌ಮೆನ್ ಸಮ್ಮುಖದಲ್ಲಿ ಮೀಟರ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತಿದೆ. ಇದಕ್ಕೆ ಗ್ರಾಹಕರಿಂದ ಯಾವುದೇ ಶುಲ್ಕವಿಲ್ಲ ಎಂದು ಜೆಸ್ಕಾಂ ಅಧಿಕಾರಿ ಸ್ಪಷ್ಟಪಡಿಸಿದರು.

ಗ್ರಾಹಕರಿಗೆ ಮಾಹಿತಿಲ್ಲ : ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಡಿಜಿಟಲ್ ಮೀಟರ್ ಅಳವಡಿಕೆ ಬಗ್ಗೆ ಈವರೆಗೆ ಯಾವುದೇ ಪತ್ರಿಕೆ ಪ್ರಕಟಣೆ ನೀಡಿಲ್ಲ. ಅಲ್ಲದೆ, ನಗರದ ಪ್ರದೇಶದಲ್ಲಿ ಪಾಲಿಕೆ ವಾಹನಗಳ ಮೂಲಕ ಪ್ರಚಾರ ನಡೆಸಿಲ್ಲ. ಪ್ರತಿಷ್ಠಿತ ಬಡಾವಣೆಗಳನ್ನು ಬಿಟ್ಟು , ಕಟ್ಟಡ ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಸ್ಲಂ ಬೋರ್ಡ್ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಮೀಟರ್ ಅಳವಡಿಸಲು ಮುಂದಾಗಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಕೆಲ ಕಾಲನಿಗಳಲ್ಲಿ ಡಿಜಿಟಲ್ ಮೀಟರ್ ಅಳವಡಿಸಲು ಮುಂದಾಗಿರುವ ಜೆಸ್ಕಾಂ ಸಿಬ್ಬಂದಿ ವಿರುದ್ಧ ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ.

ಕೋಟ್... ಜಿಲ್ಲಾದ್ಯಂತ ಡಿಜಿಟಲ್ ಮೀಟರ್ ಅಳವಡಿಕೆಯಿಂದ ವಿದ್ಯುತ್ ಸೋರಿಕೆ ತಡೆಯುವ ಉದ್ದೇಶ ಹೊಂದಿದೆ. ಜೆಸ್ಕಾಂಗೆ ಮೀಟರ್‌ನ ನಿಖರತೆ ಅಳೆಯಲು ಸಹಾಯವಾಗಲಿದೆ.

- ತೇಜಾ ನಾಯ್ಕ, ಪ್ರಭಾರಿ ಮುಖ್ಯ ಅಧೀಕ್ಷಕ ಅಭಿಯಂತರ, ಬಳ್ಳಾರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net