ಕಾರ್ಮಿಕ ನೀತಿ ವಿರೋಧಿಸಿ ಸಾರ್ವತ್ರಿಕ ಮುಷ್ಕರ

Published on

ಬಳ್ಳಾರಿ : ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ವಿರೋಧಿ ಲೇಬರ್ ಕೋಡ್ ರದ್ದು ಹಾಗೂ ಕಾರ್ಮಿಕರ ಹಕ್ಕುಗಳ ಮೇಲಿನ ದಾಳಿ ಪ್ರತಿರೋಧಿಸಿ, ಇಲ್ಲಿನ ಗಾಂಧಿಭವನದಿಂದ ಡಿಸಿ ಕಚೇರಿಯವರೆಗೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯೂ ಬೃಹತ್ ರ‌್ಯಾಲಿ ಬುಧವಾರ ನಡೆಯಿತು. ನಂತರ ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಧರಣಿ ಆರಂಭಿಸಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ನೀಡಿತು.

ಕೇಂದ್ರ ಸರ್ಕಾರ ಕಾರ್ಪೊರೇಟ್ ಬಂಡವಾಳದ ಪರ ರೂಪಿಸಿರುವ ಕಾರ್ಮಿಕ ವಿರೋಧಿ ನಾಲ್ಕು ಸಂಹಿತೆಗಳನ್ನು ರದ್ದುಪಡಿಸಬೇಕು. ರಾಷ್ಟ್ರ ಹಾಗೂ ರಾಜ್ಯವ್ಯಾಪಿ 62 ಸಾವಿರ ನೌಕರರಿಗೆ ಇವತ್ತಿನ ಬೆಲೆಗಳ ಅನುಗುಣವಾಗಿ 36 ಸಾವಿರ ರೂ. ಕನಿಷ್ಠ ವೇತನ ನಿಗದಿಪಡಿಸಬೇಕು. ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಯಾಬೇಕು. ಎಲ್ಲ ಅಸಂಘಟಿತ ಹಾಗೂ ಕೃಷಿ ಕಾರ್ಮಿಕರು ಸೇರಿದಂತೆ ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಠ ಒಂಬತ್ತು ಸಾವಿರ ರೂ. ಪಿಂಚಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಎನ್‌ಪಿಎಸ್ ಹಾಗೂ ಯುಪಿಎಸ್ ರದ್ದುಪಡಿಸಿ ಒಪಿಎಸ್ ಸ್ಕೀಂ ಮರುಸ್ಥಾಪಿಸಬೇಕು. ಸಾರ್ವಜನಿಕ ವಿತರಣೆಯನ್ನು ಸಾರ್ವತ್ರಿಕರಣಗೊಳಿಸಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಯಿತು.

ಮುಷ್ಕರದಲ್ಲಿ ಎಐಯುಟಿಸಿ, ಸಿಐಟಿಯು, ಎಐಯುಟಿಸಿ, ಐಎನ್‌ಟಿಯುಸಿ, ಎಐಐಇಎ, ಎಐಆರ್‌ಆರ್‌ಬಿಇಎ, ಬಿಇಎಫ್‌ಐ, ಎಐಬಿಒಎ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದವು.

ಸಾರ್ವತ್ರಿಕ ಮುಷ್ಕರ ನಿರಸ ಪ್ರತಿಕ್ರಿಯೆ : ಜಿಲ್ಲೆಯಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಜಿಲ್ಲೆಯಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಥಾಸ್ಥಿತಿಯಂತೆ ಸಾರಿಗೆ, ಶಾಲಾ-ಕಾಲೇಜುಗಳು, ಬ್ಯಾಂಕ್, ಆಸ್ಪತ್ರೆ, ಸರ್ಕಾರಿ ಹಾಗೂ ಖಾಸಗಿ ಕಚೇರಿ, ಮಳಿಗೆಗಳು ಕಾರ್ಯ ನಿರ್ವಹಿಸಿದವು. ಅಲ್ಲದೆ, ಯಾವುದೇ ಸಂಘಟನೆಯೂ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಪ್ರಯತ್ನಿಸಿಲ್ಲ. ಶಾಂತ ರೀತಿಯಾಗಿ ಪ್ರತಿಭಟನೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net