ಬಳ್ಳಾರಿ : ಗಣೇಶನ ಹಬ್ಬಕ್ಕೆ ಗಣಿನಾಡು ಜಿಲ್ಲೆ ಸಜ್ಜಾಗಿದೆ. ಬುಧವಾರ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಜಿಲ್ಲೆಯ ವಿವಿಧಡೆ ಬಣ್ಣ ಬಣ್ಣದ ಮಂಟಪಗಳನ್ನು ಆಲಂಕರಿಸಿದ್ದು, ಹೂವು ಹಾಗೂ ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವೇದಿಕೆ ಸಿದ್ಧಗೊಂಡಿದ್ದು ಗಣೇಶ ಹಬ್ಬ ನಾನಾ ಕಡೆ ಸಂಭ್ರಮ ಮನೆ ಮಾಡಿದೆ. ಇಲ್ಲಿನ ಮೇದಾರ ಕಾಲನಿಯಲ್ಲಿ ಪುರಿ ಜಗನ್ನಾಥ ರಥದ ಮಾದರಿ ಮಂಟಪ ಸಿದ್ಧಗೊಳಿಸಿದರೆ, ಡಾ.ರಾಜಕುಮಾರ್ ರಸ್ತೆಯಲ್ಲಿ ಎಂ.ಜಿ. ಬಳಿ ಸರ್ವಸಿದ್ಧಿ ವಿನಾಯಕ ಮಂಡಳಿಯಿಂದ ಅನಂತ ಪದ್ಮನಾಭ ಮಾದರಿ ಗಣೇಶ ನಿರ್ಮಿಸಲಾಗಿದೆ. ತಾಳೂರು ರಸ್ತೆಯಲ್ಲಿ ಹಡಗಿನ ಗಣಪ ಸೇರಿದಂತೆ ಜಿಲ್ಲಾದ್ಯಂತ ವಿವಿಧ ಮಾದರಿಗಳ ಗಣೇಶ ಪ್ರತಿಷ್ಠಾಪನೆಗೆ ವೇದಿಕೆ ಸಜ್ಜಾಗಿದೆ.
ನಗರದಲ್ಲಿ ನಿಸರ್ಗಸ್ನೇಹಿ ಮಣ್ಣಿನಗಣಪ ಮೂರ್ತಿಗಳು, ಪಿಒಪಿ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದ್ದವು. ಜನರು ತಮಗೆ ಇಷ್ಟವಾದ ಮೂರ್ತಿಯನ್ನು ಖರೀದಿಸಿ ಮನೆಗಳಿಗೆ ತೆಗೆದುಕೊಂಡು ಹೋಗುವುದು ವಿಶೇಷವಾಗಿತ್ತು. ಜತೆಯಲ್ಲಿ ಬಾಳೆಗಿಡ, ಫಲಪುಷ್ಪ ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಭರಾಟೆಯೂ ನಡೆದಿತ್ತು. ಗಣೇಶನಿಗೆ ವಿಶೇಷ ಆಲಂಕಾರ ಮಾಡುವುದು ಸಾಮಾನ್ಯ. ಹೀಗಾಗಿ ಆಲಂಕಾರ ವಸ್ತುಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಕೇಸರಿ ವರ್ಣದ ರಿಬ್ಬನ್, ಶಾಲು ಧರಿಸಿದ್ದ ಜನರು ಮಾರುಕಟ್ಟೆಯುದ್ದಕ್ಕೂ ಗಣಪತಿ ಬಪ್ಪಾ ಮೊರಯಾ ಗಟ್ಟಿಯಾದ ಧ್ವನಿ ಮೊಳಗಿಸಿದ್ದರು.
ನಗರದ ಪ್ರಮುಖ ರಸ್ತೆಗಳು, ಬಡಾವಣೆ ರಸ್ತೆಗಳಲ್ಲಿ ಬೃಹದಾಕಾರದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ಸಿದ್ಧಗೊಳಿಸಲಾಗಿತ್ತು. ಸಿದ್ಧಗೊಂಡ ಮಂಟಪಗಳ ಬಳಿಗೆ ಧ್ವನಿವರ್ಧಕಗಳ ಸದ್ದು ಹಾಗೂ ವಾದ್ಯಮೇಳ ಸಮೇತ ವಿಶೇಷ ಮೆರವಣಿಗೆಗಳಲ್ಲಿ ಗಣೇಶ ವಿಗ್ರಹಗಳನ್ನು ತೆರೆದ ವಾಹನದಲ್ಲಿ ತೆಗೆದುಕೊಂಡು ಹೋಗುವುದು ಚಿತ್ತಾಕರ್ಷಕವಾಗಿತ್ತು. ಈ ಬಾರಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ(ಪಿಒಪಿ)ತಯಾರಿಸಿದ ಗಣೇಶ ಮೂರ್ತಿಯನ್ನು ಬಹುಕಡೆ ನಿಷೇಧಿಸಲಾಗಿದೆ. ಬಹುಜನರು ಪರಿಸರ ಸ್ನೇಹಿ ಚಿಕ್ಕ ಗಣೇಶನಿಗೆ ಬೇಡಿಕೆ ಹೆಚ್ಚಿದೆ. ಅರಣ್ಯ ಇಲಾಖೆಯಿಂದ ಆಯೋಜಿಸಿದ್ದ ಪರಿಸರ ಸ್ನೇಹಿ ಗಣೇಶ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ಭಾಗವಹಿಸಿ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವಂತೆ ಕೋರಿದರು.