

ಬಳ್ಳಾರಿ: ನಗರ ಸೇರಿ ಜಿಲ್ಲಾದ್ಯಂತ ಗಣೇಶ ಚತುರ್ಥಿಯನ್ನು ಶನಿವಾರ ಸರಳವಾಗಿ ಆಚರಿಸಲಾಯಿತು.
ಸರ್ಕಾರ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಹೀಗಾಗಿ ಯಾವುದೇ ಮೆರವಣಿಗೆ ನಡೆಸದೇ ಬೆಳಗ್ಗೆ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಆಗಿದೆ. 881 ಗಣೇಶ ವಿಗ್ರಹಗಳನ್ನು ಶನಿವಾರ ಒಂದೇ ದಿನ ವಿಸರ್ಜನೆ ಮಾಡಲಾಯಿತು.
ಮೆರವಣಿಗೆ ಇಲ್ಲದ ಕಾರಣ ನೇರವಾಗಿ ಕಾಲುವೆಗಳಿಗೆ ತೆರಳಿ ವಿಸರ್ಜಿಸಿದರು. ಇನ್ನೂ 300ಕ್ಕೂ ಹೆಚ್ಚು ಕಡೆ ಮೂರು ದಿನ ಕೂಡಿಸಲು ಅನುಮತಿ ಪಡೆಯಲಾಗಿದ್ದು, ಆ.24 ಸಂಜೆ ವಿಸರ್ಜನೆಯಾಗಲಿವೆ. ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿದ ಬಹುತೇಕರು ಸಹ ಶನಿವಾರವೇ ವಿಸರ್ಜನೆ ಮಾಡಿದ ದೃಶ್ಯ ಕಂಡು ಬಂತು.