

ಬಳ್ಳಾರಿ: ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಮತ್ತೆ ಸೇರಿಸಿಕೊಳ್ಳಬೇಕೆಂದು ಹಾರೈಸಿ ಅವರ ಅಭಿಮಾನಿಗಳು ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಶುಕ್ರವಾರ 108 ತೆಂಗಿನಕಾಯಿ ಸಮರ್ಪಣೆ ಮಾಡಿದರು.
ರೆಡ್ಡಿ ಅಭಿಮಾನಿ ಶ್ಯಾಮಸುಂದರ್ ಮತ್ತು ಅವರ ಬಳಗದವರು ತೆಂಗಿನಕಾಯಿ ಸಮರ್ಪಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಮೇಲೆತ್ತುವುದರಲ್ಲಿ ಜಿ.ಜನಾರ್ದನ ರೆಡ್ಡಿ ಪ್ರಮುಖ ಪಾತ್ರವಹಿಸಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಗಳೂರು ರೀತಿಯಲ್ಲಿ ಬಳ್ಳಾರಿ ನಗರವನ್ನು ಡಬಲ್ ರಸ್ತೆ ಮತ್ತು ಬೀದಿ ದೀಪ ವ್ಯವಸ್ಥೆ ಮತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಂದು ಕೈಗೊಂಡಿದ್ದರು. ಅಲ್ಲದೆ, ಪ್ರವಾಸೋದ್ಯಮ ಇಲಾಖೆ ಸಚಿವರಾಗಿ ಹಂಪಿಗೆ ಹೆಚ್ಚಿನ ಆದ್ಯತೆ ಕೊಟ್ಟರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸು ಕಂಡಿದ್ದರು. ಅಂತಹವರು ಪಕ್ಷಕ್ಕೆ ಅವಶ್ಯವಿದೆ ಎಂದರು.