ಉಚಿತ ಲಸಿಕೆ ಅಭಿಯಾನ ಏ.26ರಿಂದ

Published on

ಬಳ್ಳಾರಿ : ಜಿಲ್ಲಾದ್ಯಂತ ಏ. 26 ರಿಂದ ಜೂ. 06 ರವರೆಗೆ ಕೇಂದ್ರ ಪುರಸ್ಕೃತ ಎನ್‌ಎಡಿಸಿಪಿ ಯೋಜನೆಯಡಿ 7ನೇ ಸುತ್ತಿನ ಕಾಲುಬಾಯಿ ಜ್ವರದ ಹಾಗೂ ಚರ್ಮಗಂಟು ರೋಗದ ಉಚಿತ ಲಸಿಕೆ ಅಭಿಯಾನ ನಡೆಯಲಿದ್ದು, ಅಭಿಯಾನದಲ್ಲಿ ರೈತರು ತಮ್ಮ ಜಾನುವಾರು ಮತ್ತು ಸಾಕು ಪ್ರಾಣಿಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಹನುಮಂತ ಕಾರಬಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 20ನೇ ಜಾನುವಾರು ಗಣಿತಿಯನ್ವಯ 1,14,577 ದನಗಳು, 66034 ಎಮ್ಮೆಗಳು ಸೇರಿ ಒಟ್ಟು 1,80,611 ದನ ಮತ್ತು ಎಮ್ಮೆಗಳಿವೆ. ಕಾಲು ಬಾಯಿ ಜ್ವರವು ಹಸು, ಎತ್ತು, ಎಮ್ಮೆ, ಹೋರಿ ಮತ್ತು ಹಂದಿಗಳಲ್ಲಿ ಕಾಣಿಸಿಕೊಳ್ಳುವ ಮಾರಕ ರೋಗವಾಗಿದ್ದು, ಮುಖ್ಯವಾಗಿ ದನ ಮತ್ತು ಎಮ್ಮೆಗಳಲ್ಲಿ ಕಂಡುಬರುವುದರಿಂದ ರೈತರಿಗೆ ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ವರ್ಷಕ್ಕೆ ಎರಡು ಬಾರಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ರೈತರು ತಮ್ಮ ದನ ಮತ್ತು ಎಮ್ಮೆಗಳಿಗೆ ಕಾಲು ಬಾಯಿ ರೋಗದ ಲಸಿಕೆಯನ್ನು ನಾಲ್ಕು ತಿಂಗಳು ಮೇಲ್ಪಟ್ಟ ದನ ಮತ್ತು ಎಮ್ಮೆಗಳಿಗೆ ತಪ್ಪದೇ ಹಾಕಿಸಬೇಕು ಎಂದು ತಿಳಿಸಿದ್ದಾರೆ.

ಜಿಲ್ಲೆಯ ಎಲ್ಲಾ ರೈತರು ಕಾಲುಬಾಯಿ ಜ್ವರ ಲಸಿಕೆ ಹಾಗೂ ಚರ್ಮಗಂಟು ರೋಗ ಲಸಿಕಾ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮೆಲ್ಲ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net