ಬಳ್ಳಾರಿ: ಖಾತೆಗಳ ದಾಖಲೆಗಳನ್ನು ಅಕ್ರಮವಾಗಿ ಬಳಸಿಕೊಂಡು ಇಲ್ಲಿನ ಖಾಸಗಿ ಫಿನಾನ್ಸ್ ಕಂಪನಿಯೊಂದಕ್ಕೆ 18.40 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಐವರ ವಿರುದ್ಧ ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಶೇಕ್ಷಾವಲಿ, ಹರಿಕೃಷ್ಣ ಡಿ., ಸುಧಾರಾಣಿ, ಬಸವರಾಜ, ಸಿದಲ್ಲಿಂಗಯ್ಯ ಆರೋಪಿತರು.
ಗ್ರಾಹಕರು ನೀಡಿದ್ದ ದಾಖಲೆಗಳನ್ನು ಅನುಮತಿ ಇಲ್ಲದೇ ಬಳಸಿಕೊಂಡು ವೈಯಕ್ತಿ ಸಾಲಗಳನ್ನು ಮಂಜೂರು ಮಾಡಿರುವುದು, ಸೂಕ್ತ ಪರಿಶೀಲನೆ ನಡೆಸದೇ ಇರುವುದು, ಕ್ರೆಡಿಟ್ ಮಂತ್ರಿ ಯೋಜನೆ ಅಡಿ ವೈಯಕ್ತಿಕ ಸಾಲಗಳನ್ನು ಕುಟುಂಬಸ್ಥರ ಹೆಸರಲ್ಲಿ ಸೃಷ್ಟಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದು, ಗ್ರಾಹಕರಿಂದ ಪಡೆದ ಹಣವನ್ನು ಕಂಪನಿಗೆ ಸಂದಾಯ ಮಾಡದೇ ಇರುವ ಆರೋಪಗಳನ್ನು ಕಂಪನಿಯು ತನ್ನದೇ ಸಿಬ್ಬಂದಿಗಳ ಮೇಲೆ ಹೊರಿಸಿದೆ.
ಆರೋಪಿಗಳು 23 ನಕಲಿ ವೈಯಕ್ತಿಕ ಸಾಲಗಳಿಂದ 22.75 ಲಕ್ಷ ರೂ. ದುರ್ಬಳಕೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಸದ್ಯ ಒಟ್ಟಾರೆ 31.30 ಲಕ್ಷ ರೂ. ಅವ್ಯಹಾರದಲ್ಲಿ 12.90 ಲಕ್ಷ ರೂ. ಹಿಂದಕ್ಕೆ ನೀಡಿದ್ದು, ಇನ್ನೂ 18.40 ಲಕ್ಷ ರೂ.ಗಳನ್ನು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.