ಬಳ್ಳಾರಿ : ನಗರದ ಆರಾಧ್ಯದೈವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮ ರಥೋತ್ಸವವು ಶ್ರದ್ಧಾ ಭಕ್ತಿಯೊಂದಿಗೆ ಅತ್ಯಂತ ಅದ್ಧೂರಿಯಾಗಿ ಬುಧವಾರ ಸಂಜೆ ಜರುಗಿತು.
ನಗರದ ಕೋಟೆ ಪ್ರದೇಶದಲ್ಲಿನ ಶ್ರೀ ಮಲ್ಲೇಶ್ವರ ಸ್ವಾಮಿಗೆ ವಾರ್ಷಿಕ ಬ್ರಹ್ಮ ರಥೋತ್ಸವದ ನಿಮಿತ್ತ ಬೆಳಗ್ಗೆಯಿಂದಲೇ ವಿವಿಧ ಅಭಿಷೇಕಗಳನ್ನು ಮಾಡಿ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.
ಬಳಿಕ ಬೆಳಗ್ಗ 10.30ರ ಸುಮಾರಿಗೆ ಬ್ರಹ್ಮ ರಥೋತ್ಸವದ ತೇರನ್ನು ಎಳೆಯುವ ತೇರು ಬೀದಿಯಲ್ಲಿ ಮಡಿತೇರನ್ನು ಎಳೆಯಲಾಯಿತು. ಇದೇ ವೇಳೆ ರಥವನ್ನು ಸ್ವಲ್ಪ ಮುಂದಕ್ಕೆ ಎಳೆದು ಬಿಡಲಾಗಿತ್ತು.ನಂತರ ಸಂಜೆ 4.30 ರ ಸುಮಾರಿಗೆ ಲಕ್ಷಾಂತರ ಜನರ ನಡುವೆ ತೇರನ್ನು ಎಳೆಯಲಾಯಿತು. ತೇರು ಬೀದಿಯಿಂದ ಆರಂಭವಾಗಿ, ಬ್ರೂಸ್ ಪೇಟೆ ಪೊಲೀಸ್ ಠಾಣೆ ವೃತ್ತ, ದೊಡ್ಡ ಮಾರುಕಟ್ಟೆ, ಕೊಲಿಮಿ ಬಜಾರ್ ವರೆಗೆ ಎಳೆದು, ಪುನಃ ವಾಪಸ್ ಮೂಲಸ್ಥಾನಕ್ಕೆ ತಂದು ನಿಲ್ಲಿಸಲಾಯಿತು.
ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥಕ್ಕೆ ಜನರು ಹೂವು, ಹಣ್ಣು ಅರ್ಪಿಸಿ ಭಕ್ತಿ ಸಮರ್ಪಿಸಿದರು.
ಜಾತ್ರೆಯಲ್ಲಿ ನಂದಿಕೋಲು, ಕುಣಿತ, ತಾಷಾ ರಾಮ್ ಡೋಲು, ಹಗಲುವೇಷ ಕುಣಿತ, ಗಾರುಡಿ ಗೊಂಬೆಗಳು ಜಾತ್ರೆಗೆ ಮೆರುಗು ನೀಡಿದವು. ನಗರ ಶಾಸಕ ನಾರಾ ಭರತ್ ರೆಡ್ಡಿ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ಜನರ ನ ಸೆಳೆದರು. ಪಾಲಿಕೆ ಸದಸ್ಯ ನೂರ್ ಸೇರಿ ಹಲವರು ಶಾಸಕರಿಗೆ ಸಾಥ್ ನೀಡಿದರು.
ಮಜ್ಜಿಗೆ ವಿತರಣೆ:
ನಗರದ ಆರಾಧ್ಯ ದೈವ ಶ್ರೀ ಕೋಟೆ ಮಲ್ಲೇಶ್ವರ ಸ್ವಾಮಿ ರಥೋತ್ಸವ ನಿಮಿತ್ತ ಜಾತ್ರೆಗೆ ಆಗಮಿಸುವ ಭಕ್ತರಿಗೆ ವಾಸವಿ ಸಂಘಟನೆ ಸೇರಿ ವಿವಿಧ ಸಂಘ ಸಂಸ್ಥೆಗಳು ನಗರದ ಬೆಂಗಳೂರು ರಸ್ತೆ, ರಥ ಬೀದಿಯಲ್ಲಿ ಹಲವೆಡೆ ಮಜ್ಜಿಗೆ ವಿತರಿಸುವ ಮೂಲಕ ಭಕ್ತರ ದಾಹ ತಣಿಸಲಾಯಿತು.