

ಬಳ್ಳಾರಿ: ರಾಜ್ಯದಲ್ಲಿ 20 ವರ್ಷಗಳಿಂದ ಆಯ್ಕೆಯಾದ ಎಲ್ಲ ಪಕ್ಷಗಳ ಶಾಸಕರು ಹಾಗೂ ಸಂಸದರ ಆದಾಯದ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ಮಾಡಿಸಲಿ. ಭ್ರಷ್ಟಾಚಾರದಿಂದ ಸಂಪಾದಿಸಿದ ಆಸ್ತಿ ಇದ್ದರೆ ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದರು.
ಡಿ.ಕೆ.ಶಿವಕುಮಾರ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಪಕ್ಷ ಸದೃಢವಾಗುತ್ತಿದೆ. ಭೂ ಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹೋರಾಟ ನಡೆಸುವುದರ ಜತೆಗೆ ಕೋವಿಡ್ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತಿದ್ದೇವೆ. ಉಪ ಚುನಾವಣೆಗಳು ಘೋಷಣೆಯಾದಾಗ ಡಿ.ಕೆ.ಶಿವಕುಮಾರ ಮತ್ತು ಅವರ ಸಹೋದರರ ನಿವಾಸದ ಮೇಲೆ ಸಿಬಿಐ ದಾಳಿ ನಡೆದಿರುವುದು ರಾಜಕೀಯ ಪ್ರೇರಿತ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕಾಯ್ದೆಗಳ ತಿದ್ದುಪಡಿ ಮಾಡಿರುವುದನ್ನು ಹಿಂಪಡೆಯಬೇಕು. ರಾಜ್ಯದಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು ಹಾಗೂ ರಾಜಕೀಯ ನಾಯಕರ ಮಕ್ಕಳ ಕುರಿತು ಜನರಲ್ಲಿ ಮೂಡಿರುವ ಸಂಶಯಗಳನ್ನು ದೂರ ಮಾಡಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್.ಮೊಹಮ್ಮದ್ ರಫೀಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಂ.ಹನುಮ ಕಿಶೋರ, ಮುಖಂಡ ಕಲ್ಲುಕಂಬ ಪಂಪಾಪತಿ ಇದ್ದರು.
ಉತ್ತರ ಪ್ರದೇಶ ರಾವಣ ರಾಜ್ಯವಾಗಿದೆ. ಅಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ರಾಮ ಹಾಗೂ ಮಹಿಳೆಯರ ಬಗ್ಗೆ ಗೌರವ ಇದ್ದರೆ ಹಾಥರಸ್ ಘಟನೆಯ ನೈತಿಕ ಹೊಣೆ ಹೊರಬೇಕು. ಹಾಥರಸ್ ಪ್ರಕರಣದ ಸಾಕ್ಷ್ಯ ನಾಶ ಮಾಡಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಬೇಕು. ವಾಲ್ಮೀಕಿ ಯುವತಿ ಮೇಲೆ ಅತ್ಯಾಚಾರ ನಡೆದರೂ ಸಚಿವರಾದ ಬಿ.ಶ್ರೀರಾಮುಲು, ರಮೇಶ ಜಾರಕಿಹೊಳಿ ಮಾತನಾಡುತ್ತಿಲ್ಲ. | ವಿ.ಎಸ್.ಉಗ್ರಪ್ಪ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ