ಆದರ್ಶ ತತ್ವಗಳು ಪಾಲಿಸಿ

Published on

ಬಳ್ಳಾರಿ ; ಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಮೌಲ್ಯ ಮತ್ತು ತತ್ವಗಳ ಮಾರ್ಗದರ್ಶನದಲ್ಲಿ ಸಾಗೋಣ ಎಂದು ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಹೇಳಿದರು.

ನಗರದ ಬಸವ ಭವನ ವೇದಿಕೆ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀಶೈಲ ಮಲ್ಲಿಕಾರ್ಜುನನನ್ನು ಆರಾಧ್ಯ ದೈವವಾಗಿ ಸ್ವೀಕರಿಸಿ, ಸಾಕ್ಷಾತ್ಕರಿಸಿಕೊಂಡ ಸಾಧ್ವಿ ಮಲ್ಲಮ್ಮ ವೇಮನ ಮಹಾಯೋಗಿಯಾಗಿ ಬದಲಾಗಲು ಪ್ರೇರಣೆಯಾದವರು ಎಂದು ಹೇಳಿದರು.

ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್ ಮಾತನಾಡಿ, ಮಹಾಸಾದ್ವಿಯಾದ ಹೇಮರೆಡ್ಡಿ ಮಲ್ಲಮ್ಮ ಎಲ್ಲರಿಗೂ ಆದರ್ಶ ಮಹಿಳೆಯಾಗಿದ್ದು, ಭಕ್ತಿ ಮಾರ್ಗದ ಮೂಲಕ ಶ್ರೀಶೈಲ ಮಲ್ಲಿಕಾರ್ಜುನ ದೇವರ ಮಹಿಮೆ ನಾಡಿಗೆ ಸಾರಿದ್ದಾರೆ. ಇಂದಿಗೂ ಕೂಡ ಆಂದ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಕಣ್ಣಿರು ಎಂಬ ಸ್ಥಳದಲ್ಲಿ ಹೇಮರೆಡ್ಡಿ ಮಲ್ಲಮ್ಮ ಅವರ ದೇವಸ್ಥಾನವನ್ನು ನೋಡಬಹುದು ಎಂದರು.

ನಿವೃತ್ತ ಅಧ್ಯಾಪಕಿ ಸುಶೀಲ ಸಿರೂರು ಮಾತನಾಡಿ, 15ನೇ ಶತಮಾನದ ಪ್ರಸಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜನಮಾನಸದಲ್ಲಿ ತನ್ನ ಭಕ್ತಿ ಹಾಗೂ ಕಾಯಕದಿಂದ ಮನೆಮಾತಾಗಿದ್ದಾರೆ. ಕೌಟುಂಬಿಕ ಸಂಕಷ್ಟಗಳನ್ನು ಮೆಟ್ಟಿ ನಿಂತು, ಆದರ್ಶ ಮೌಲ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಚಿಂತನೆಯಲ್ಲಿ ಸಾಧನೆಗೈದ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸ್ತ್ರೀ ಕುಲಕ್ಕೆ ಮಾದರಿ. ಹೇಮರೆಡ್ಡಿ ಮಲ್ಲಮ್ಮನ ಪವಾಡ ಹಾಗೂ ಭಕ್ತಿಯ ಕುರಿತು ಹಲವು ಪ್ರತೀತಿ ಹಾಗೂ ಕಥನಗಳಿವೆ. ಸಂತ ಶಿಶುನಾಳ ಶರೀಫರು ಹೇಮರೆಡ್ಡಿ ಮಲ್ಲಮ್ಮಳನ್ನು ರೆಡ್ಡಿ ಕುಲದ ಉದ್ಧಾರಕಳು ಎಂದು ಬಣ್ಣಿಸಿದ್ದಾರೆ.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಮುಖಂಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಯು ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಬಸವ ಭವನ ವೇದಿಕೆಯವರೆಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕ್ರತಿಕ ಕಲಾ ತಂಡಗಳು ಗಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net