ಬಳ್ಳಾರಿ : ಯಾರೇ ಎಷ್ಟೇ ಪ್ರಭಾವಿಶಾಲಿ ವ್ಯಕ್ತಿಯಾಗಿರಲಿ ಸಂವಿಧಾನದ ಆಧಾರದ ಮೇಲೆ ದೇಶದ ಕಾಯ್ದೆ ಹಾಗೂ ಸುಪ್ರಿಂ ಕೋರ್ಟ್ ಅಜ್ಞೆಗಳು ಉಲ್ಲಂಘಿಸಿದರೆ, ಸ್ಪಷ್ಟವಾಗಿ ನ್ಯಾಯಪರ ಹೋರಾಟ ನಡೆಸಲಾಗುವುದು ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ಸಂಡೂರು ತಾಲೂಕಿನ ನರಸಿಂಗಪುರ ಗ್ರಾಮದ ಬಳಿಯ ದೇವದಾರಿ ಬಳಿಯ ಅರಣ್ಯಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಹೋರಾಟಗಾರರೊಂದಿಗೆ ಭಾಗವಹಿಸಿ ಮಾತನಾಡಿದರು. ಸಂವಿಧಾನದ ಮೂಲ ತತ್ವಗಳಾದ ಸ್ವಾತಂತ್ರೃತೆ, ಸಮಾನತೆ ಮತ್ತು ಬ್ರಾತತ್ವ ಆಧಾರ ಮೇಲೆ ಹೋರಾಟ ನೆಡೆಸುತ್ತಿದ್ದೇವೆ. ಯಾವೇ ವ್ಯಕ್ತಿಯಾಗಲಿ ಸಂವಿಧಾನದ ಚೌಕಟ್ಟು ಬಿಟ್ಟು ಹೇಳಲು ಸಾಧ್ಯವಿಲ್ಲ ಎಂದರು.
ಸದ್ಯ ಈ ಭೂಮಿಯು ಕಂದಾಯ ಹಾಗೂ ಅರಣ್ಯಕ್ಕೆ ಸಂಬಂಧಿಸಿದ ಆಗಿರುವುದರಿಂದ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಉಪ ಸಮಿತಿ ರಚನೆಯಾಗಬೇಕು. ಅಲ್ಲದೆ, ಯಾರೇ ಅರಣ್ಯ ಭೂಮಿಯೊಳಗೆ ಪ್ರವೇಶಿಸಬೇಕಾದರೆ ಅರಣ್ಯಾಧಿಕಾರಿಗಳ ಅನುಮತಿ ಪಡೆಯಬೇಕು. ಆದ್ದರಿಂದ, ಯಾರೇ ಆಗಲಿ ಈ ದೇಶದ ಸಾಮಾನ್ಯ ಜನತೆಗೆ ಅನ್ಯಾಯವಾದರೆ ನಾವು ಸುಮ್ಮನೆ ಇರುವುದಿಲ್ಲ. ಕಳೆದ ನಾಲ್ಕೂವರೆ ದಶಕದಿಂದ ಕಾಯ್ದೆ ಬದ್ದವಾಗಿ ಹೋರಾಟ ನಡೆಸಿದ್ದೇವೆ ಎಂದರು.
ಕಳೆದ ಕೆಲ ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಕೇವಲ ತನಿಖೆ ಸಲುವಾಗಿ ಮೂರು ವರ್ಷ ಜೈಲು ಸೇರಿದ್ದರು. ಅಲ್ಲದೆ, ಸಮಗ್ರ ಕ್ರಿಮಿನಲ್ ಗ್ಯಾಂಗ್, ಶಾಸಕರು , ನಾಲ್ವರು ಹಿರಿಯ ಐಎಎಸ್ ಹಾಗೂ ಪೊಲೀಸ್ ಅಧಿಕಾರಿಗಳು ಸೆರೆವಾಸ ಅನುಭವಿಸಿದ್ದಾರೆ. ಅಂದರೆ, ನಾವು ಮಾಡುವ ಹೋರಾಟದ ತಳಪಾಯ ನ್ಯಾಯ, ಸತ್ಯ ಹಾಗೂ ಅಹಿಂಸತ್ಮಾಕದಿಂದ ಹೋರಾಟ ಪ್ರತಿಭಟಿಸಬೇಕು ಎಂದು ಹೋರಾಟಗಾರರಿಗೆ ತಿಳಿಸಿದರು.
ಕೆಐಒಸಿಎಲ್ ಕಂಪನಿಯು ಅಧಿಕಾರಿಗಳ ಬೆಂಬಲದಿಂದ ಕೆಲ ವ್ಯಕ್ತಿಗಳು ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹೋರಾಟಗಾರರ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.