ಸಂಭ್ರಮದ ಗಣೇಶ ಆಚರಣೆ

Published on

ಬಳ್ಳಾರಿ : ಜಿಲ್ಲಾದ್ಯಂತ ಗೌರಿ -ಗಣೇಶನ ಹಬ್ಬವನ್ನು ಸಡಗರ, ಸಂಭ್ರಮ ಮತ್ತು ಶ್ರದ್ಧಾ -ಭಕ್ತಿಯಿಂದ ಬುಧವಾರ ಆಚರಿಸಲಾಯಿತು. ನಗರದ ಕನಕ ದುರ್ಗಮ್ಮ, ಬೆಂಗಳೂರು ರಸ್ತೆ ಸೇರಿದಂತೆ ನಾನಾ ಕಡೆ ಗಣಪ ಮೂರ್ತಿಗಳನ್ನು ಖರೀದಿಸಿ ಕೆಲವರು ಬರಿಗಾಲಲ್ಲಿ ತಲೆ ಮೇಲೆ ಹೊತ್ತು ಸಾಗಿದರೆ, ಕೆಲವರು ದ್ವಿಚಕ್ರ ವಾಹನ, ಆಟೋ, ಟ್ಯಾಕ್ಟರ್‌ಗಳಲ್ಲಿ ಇರಿಸಿಕೊಂಡು ಪಟಾಕಿಗಳನ್ನು ಸಿಡಿಸುತ್ತಾ, ಡೊಳ್ಳು, ಹಾಡುಗಳಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಮೂಲಕ ಪ್ರತಿಷ್ಠಾಪನೆ ಮಾಡುವ ಸ್ಥಳಗಳಿಗೆ ತೆಗೆದುಕೊಂಡು ಬಂದರು. ಜೈಕಾರ ಮುಗಿಲು ಮುಟ್ಟಿತ್ತು. ಗಣಪತಿಗಳನ್ನು ಕೂರಿಸುವ ಮಂಟಪಗಳನ್ನು ಬಣ್ಣ - ಬಣ್ಣದ ಕಾಗದ ಆಲಂಕೃತ ದೀಪಗಳು, ಕಬ್ಬು, ಬಾಳೆ ದಿಂಡು, ತಳಿರು ತೋರಣಗಳಿಂದ ಶೃಂಗರಿಸಿ ಗಣಪನ ನಾನಾ ಬಗೆಯ ಮೂರ್ತಿಗಳನ್ನು ಇರಿಸಿದರು. ಮೋದಕ, ಕರಿಗಡಬು, ನೈವೇದ್ಯ ಹಿಡಿದು, ಪೂಜೆ ಸಲ್ಲಿಸಿ, ಆರತಿ ಬೆಳಗಿ ಭಕ್ತಿಯನ್ನು ಸಮರ್ಪಣೆ ಮಾಡಿದರು.

ಗಣಪನ ಭಕ್ತರು ರಾತ್ರಿ ವೇಳೆ ಕುಟುಂಬ ಸಮೇತರಾಗಿ ತಮ್ಮ ತಮ್ಮ ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ ವಿಘ್ನನಿವಾಕರಕನ ಮೂರ್ತಿಗಳ ದರ್ಶನ ಪಡೆದರು. ನಗರದಲ್ಲಿ ಸಾರ್ವಜನಿಕರವಾಗಿ ಹಲವು ಪ್ರದೇಶಗಳಲ್ಲಿ ಗಣಪತನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಎಲ್ಲೆಡೆ ಸಂಭ್ರಮ ಮನೆ ಮಾಡಿತು. ವಿವಿಧ ಬಳಗಗಳು ಗಣೇಶೋತ್ಸವ ಅಂಗವಾಗಿ ರಂಗೋಲಿ ಸೇರಿದಂತೆ ಗ್ರಾಮೀಣ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೂಂಡು ಸಂಭ್ರಮಿಸಿದರು.

ನಗರದ ಡಾ.ರಾಜಕುಮಾರ್ ರಸ್ತೆಯಲ್ಲಿ ವಿನಾಯಕ ಮಿತ್ರ ಮಂಡಳಿಯಿಂದ ಅನಂತ ಪದ್ಮನಾಭ, ವಿದ್ಯಾ ಗಣಪತಿ ಅಸೋಸಿಯೇಷನ್‌ದಿಂದ ಮಧ್ಯಪ್ರದೇಶ ಉಜ್ಜಿಯನಿಯ ಚಿಂತಾಮಣಿ ಗಣೇಶ ದೇವಲಾಯ, ಸಿಂಧಗಿ ಕೌಂಪಂಡ್‌ನಲ್ಲಿ ಅಪರೇಷನ್ ಸಿಂಧೂರ, ಮೇದಾರ ಕಾಲನಿಯಲ್ಲಿ ಪುರಿ ಜಗನ್ನಾಥ ಮಾದರಿ ಸೇರಿದಂತೆ ಜಿಲ್ಲೆಯ ವಿವಿಧಡೆ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಜನರನ್ನು ಗಮನ ಸೆಳೆದವು.

ಜಿಲ್ಲಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಲ್ಲದೇ, ಮೊದಲ ದಿನ ವಿಸರ್ಜನೆ ಸ್ಥಳಗಳಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ವಿದ್ಯುತ್ ದೀಪ, ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಪೊಲೀಸರು, ಗೃಹರಕ್ಷಕ ಸಿಬ್ಬಂದಿ ಹಾಗೂ ಮುಳುಗು ತಜ್ಞರು ಸ್ಥಳದಲ್ಲಿದ್ದರು. ರಾತ್ರಿಯೀಡಿ ಪೊಲೀಸರು ಗಸ್ತು ತಿರುಗುವುದು ಕಂಡು ಬಂತು. ಮೊದಲ ದಿನ ಮನೆ, ಮಳಿಗೆ, ಕಚೇರಿಗಳಲ್ಲಿ ಕೂರಿಸಿದ್ದ ಗಣಪನ ಮೂರ್ತಿಗಳನ್ನು ಹೆಚ್ಚಾಗಿ ವಿಸರ್ಜಿಸಲಾಯಿತು. ಮೂರನೇ ಹಾಗೂ ಐದನೇ ದಿನಕ್ಕೆ ಹೆಚ್ಚಿನ ಗಣಪಗಳು ವಿಸರ್ಜನೆಗೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net