ಬಳ್ಳಾರಿ; ರಾಜ್ಯದಲ್ಲಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆಯಿಂದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಸಾವಿರಾರು ಕಿಂಟ್ವಾಲ್ ಜೋಳವು ಸಮಯಕ್ಕೆ ಸರಿಯಾಗಿ ರಾಜ್ಯ ಉಗ್ರಾಣ ನಿಗಮಕ್ಕೆ ಸ್ಥಳಾಂತರಿಸದೆ ಹಿನ್ನೆಲೆ ಮೊಳಕೆ ಒಡೆಯುವ ಭೀತಿ ಎದುರಾಗಿದೆ.
ಕಳೆದ ತಿಂಗಳಿಂದ ಮುಂಗಾರಿನಲ್ಲಿ ಬೆಳೆದ ಜೋಳವನ್ನು ಜಿಲ್ಲೆಯ ಐದು ಖರೀದಿ ಕೇಂದ್ರಗಳಲ್ಲಿ 2.68 ಲಕ್ಷ ಕಿಂಟ್ವಾಲ್ ಖರೀದಿಸಿ ಸಂಗ್ರಹಿಸಲಾಗಿದೆ. ಈಗಾಗಲೇ ಸಾವಿರಾರು ಕಿಂಟ್ವಾಲ್‌ನಷ್ಟು ರಾಜ್ಯ ಉಗ್ರಾಣ ನಿಗಮ(ಎಸ್‌ಡಬ್ಲೂಸಿ)ಗೆ ರವಾನಿಸಲಾಗಿದೆ. ಆದರೆ, ಇನ್ನೂ ಕೆಲ ಖರೀದಿ ಕೇಂದ್ರದ ಆವರಣದಲ್ಲಿ ಸಾವಿರಾರು ಕಿಂಟ್ವಾಲ್ ಜೋಳವು ಉಳಿದಿದ್ದು ನಿರಂತರ ಮಳೆಯಿಂದ ಒಂದೇ ಸ್ಥಳದಲ್ಲಿ ಸಂಗ್ರಹಿಸಿರುವುದರಿಂದ ಮೊಳಕೆ ಒಡೆದಿವೆ. ಅಲ್ಲದೆ, ರಾಯಚೂರು, ವಿಜಯನಗರ ಜಿಲ್ಲೆಯ ಖರೀದಿ ಕೇಂದ್ರಗಳಲ್ಲಿಯೂ ಇದೇ ವ್ಯವಸ್ಥೆಯಾಗಿದೆ. ಸಮಯಕ್ಕೆ ಸರಿಯಾಗಿ ಸೂಕ್ತ ಸ್ಥಳಕ್ಕೆ ವಿಲೇವಾರಿಗೊಳಿಸಿ ಸಂರಕ್ಷಿಸಬೇಕಿದ್ದ ಅಧಿಕಾರಿಗಳು ನಿರ್ಲಕ್ಷೃ ತೋರುತ್ತಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ರಾಜ್ಯದ ವಿವಿಧಡೆ ಹಿಂಗಾರಿನ ಜೋಳ ಖರೀದಿಸಲಾಗುತ್ತಿದೆ.
ಸೂಕ್ತ ಉಗ್ರಾಣಗಳಿಲ್ಲ : ಬಳ್ಳಾರಿ, ರೂಪನಗುಡಿ, ಸಿರಗುಪ್ಪ, ಹಚ್ಚೋಳ್ಳಿ, ತಾಳೂರು, ಕರೂರು, ಅರಳಿಗನೂರು, ಮುದ್ದಟನೂರು, ಕಂಪ್ಲಿ, ಎಮ್ಮಿಗನೂರು, ಕುರುಗೋಡು ಹಾಗೂ ಸಂಡೂರು ಸೇರಿದಂತೆ ಒಟ್ಟು ಜಿಲ್ಲಾದ್ಯಂತ ಒಟ್ಟು ಹದಿಮೂರು ಖರೀದಿ ಕೇಂದ್ರಗಳಲ್ಲಿ ಹಿಂಗಾರು ಜೋಳ ಖರೀದಿಸಲಾಗುತ್ತಿದೆ. ಆದರೆ, ಖರೀದಿಸಿದ ಜೋಳವನ್ನು ಸಂರಕ್ಷಿಸಲು ಸೂಕ್ತ ಸ್ಥಳ ಹಾಗೂ ಉಗ್ರಾಣ ಸೌಲಭ್ಯವಿರುವುದು ಕೇವಲ ಜಿಲ್ಲೆಯ ಎರಡ್ಮೂರು ಖರೀದಿ ಕೇಂದ್ರಗಳಿಗೆ ಮಾತ್ರ. ಉಳಿದಂತೆ ಗ್ರಾಮದ ಬಯಲು ಪ್ರದೇಶ, ಛೌಡ್ರಿ ಹಾಗೂ ಹಳೆಯ ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಇದರಿಂದ ಮಳೆಗೆ ಆಹಾರ ಧಾನ್ಯ ಕೆಟ್ಟು ಸಾರ್ವಜನಿಕರು ಸೇವಿಸಿದರೆ ಆರೋಗ್ಯದ ಗಂಭೀರ ಪರಿಣಾಮ ಬೀರಲಿದೆ. ಅಲ್ಲದೆ, ಹಿಂಗಾರಿನ ಜೋಳವನ್ನು ಕೇಂದ್ರ ಉಗ್ರಾಣ ನಿಗಮ (ಸಿಡಬ್ಲೂಸಿ)ಗೆ ರವಾನಿಸಲಾಗುವುದು. ಮೇಲಧಿಕಾರಿಗಳಿಂದ ಇನ್ನೂ ಯಾವುದೇ ಜೋಳ ಸಾಗಣೆಯ ಆದೇಶ ಬಂದಿಲ್ಲ ಎಂಬುದಾಗಿ ಅಧಿಕಾರಿ ತಿಳಿಸಿದರು.
ಅಧಿಕಾರಿಗಳ ತಲೆದಂಡವಿಲ್ಲ : ಕಳೆದ ವರ್ಷ ಬೆಂಬಲ ಬೆಲೆಯಡಿ ಖರೀದಿಸಿದ ಜೋಳವನ್ನು ನಗರದ ರಾಜ್ಯ ಉಗ್ರಾಣ ನಿಗಮದಲ್ಲಿ ಸಂಗ್ರಹಿಸಲಾಗಿತ್ತು. ಆದರೆ, ಸಮಯಕ್ಕೆ ಸರಿಯಾಗಿ ವಿಲೇವಾರಿ ಮಾಡದೆ ಇದ್ದರಿಂದ ನಲವತ್ತು ಸಾವಿರಕ್ಕೂ ಅಧಿಕ ಕಿಂಟ್ವಾಲ್‌ನಷ್ಟು ಜೋಳಕ್ಕೆ ಹುಳು ತಿಂದು ಪುಡಿಯಾಗಿ ಹಾಳಾಗಿತ್ತು. ಉಪ ಲೋಕಾಯುಕ್ತರು ದಾಳಿ ನಡೆಸಿ ಅಧಿಕಾರಿಗಳ ಮೇಲೆ ನೋಟಿಸ್ ಜಾರಿ ಮಾಡಿದ್ದರು. ರಾಯಚೂರು ಕೃಷಿ ವಿವಿಯು ಆಹಾರಕ್ಕೆ ಯೋಗ್ಯ ಎಂಬುದಾಗಿ ವರದಿ ನೀಡಿತು. ಬಳಿಕ ಕಲಬುರಗಿ ಆಹಾರ ಇಲಾಖೆಯ ಸಂಬಂಧಿಸಿದ ಲ್ಯಾಬ್‌ವೊಂದು ಮನುಷ್ಯರ ಧಾನ್ಯ ಆಹಾರ ಬಳಕೆಗೆ ಯೋಗ್ಯವಲ್ಲ ಎಂಬುದಾಗಿ ವರದಿ ನೀಡಿದರೂ ಕೂಡ ಉಗ್ರಾಣ ನಿಗಮದಿಂದ ಪಡಿತರ ಅಂಗಡಿಗಳಿಗೆ ಜೋಳ ವಿತರಿಸಲಾಗಿತ್ತು. ಆದರೆ, ಈವರೆಗೂ ಯಾವ ಅಧಿಕಾರಿಯೂ ಮೇಲೆ ಕೂಡ ಕ್ರಮವಹಿಸಿಲ್ಲ.
ವರದಿ ಬಳಿಕ ವಿತರಿಸಲಿ : ಕಳೆದ ಐದು ತಿಂಗಳ ಹಿಂದಯೇ ರೈತರು ಕಟಾವುಗೊಂಡು ಜೋಳವನ್ನು ತಮ್ಮ ಮನೆಗಳಲ್ಲಿ ಸಂಗ್ರಹಿಸಿಕೊಂಡಿದ್ದಾರೆ. ಇದರಿಂದ ಜೋಳಕ್ಕೆ ಹುಳ ಬೀಳುವ ಅತಂಕ ಹಾಗೂ ಇತ್ತೀಚಿನ ಮಳೆಯಿಂದ ಜೋಳವು ಮೊಳಕೆ ಒಡೆದಿವೆ. ಆದ್ದರಿಂದ, ರಾಜ್ಯಾದ್ಯಂತ ಖರೀದಿ ಕೇಂದ್ರಗಳಲ್ಲಿ ಖರೀದಿಸಿದ ಜೋಳವನ್ನು ಪಡಿತರ ಅಂಗಡಿಗಳಿಗೆ ವಿತರಿಸುವ ಮುನ್ನ ಜೋಳ ಪರೀಕ್ಷಿಸಿ ಬಳಕೆಗೆ ಯೋಗ್ಯವೆಂದ ಬಳಿಕ ವಿತರಿಸಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಕೋಟ್... ಜಿಲ್ಲೆಯಲ್ಲಿ ಮುಂಗಾರಿನಲ್ಲಿ ಖರೀದಿಸಿದ ಬಹುತೇಕ ಜೋಳ ಎಸ್‌ಡಬ್ಲೂಸಿಗೆ ಸ್ಥಳಾಂತರಿಸಲಾಗಿದೆ. ಇನ್ನೂ ಕೆಲ ಕಿಂಟ್ವಾಲ್‌ನಷ್ಟು ಜೋಳ ಉಳಿದಿದ್ದು ಎರಡ್ಮೂರು ದಿನಗಳಲ್ಲಿ ಕಳುಹಿಸಲಾಗುವುದು.
- ಸಕೀನಾ, ಉಪನಿರ್ದೇಶಕಿ, ಆಹಾರ ಇಲಾಖೆ, ಬಳ್ಳಾರಿ.