

ಬಳ್ಳಾರಿ: ಎಫ್‌ಡಿಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಗರದ ರಾಯಲ್ ವೃತ್ತದಲ್ಲಿ ಭಾನುವಾರ ಎಬಿವಿಪಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಎಬಿವಿಪಿ ನಗರ ಘಟಕದ ಕಾರ್ಯದರ್ಶಿ ಹೊನ್ನೂರಸ್ವಾಮಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು ಇದು ಮೊದಲಲ್ಲ. ಕೆಪಿಎಸ್ಸಿಯಲ್ಲಿ ಇದು ಸಾಮಾನ್ಯವಾಗಿದೆ. ಅಕ್ರಮ ಮತ್ತು ಭ್ರಷ್ಟಾಚಾರ ಮರುಕಳಿಸುತ್ತಿದ್ದರೂ ಕಡಿವಾಣ ಹಾಕಲು ಯಾವುದೇ ಕ್ರಮಕೈಗೊಳ್ಳದ ಕೆಪಿಎಸ್ಸಿ ವಿರುದ್ಧ ಹೈಕೋರ್ಟ್ ಕೂಡ ಕೆಂಡಕಾರಿದೆ. ಪದೇಪದೇ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೋಬಲ ಕುಗ್ಗಿ ಕೆಪಿಎಸ್ಸಿ ಮೇಲಿರುವ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರದ್ಧು ಕಠಿಣ ಕ್ರಮಕೈಗೊಳ್ಳಬೇಕು. ಇಂಥ ಘಟನೆಗಳು ಮರುಕಳಿಸದಂತೆ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ದೊಡ್ಡ ಬಸವನಗೌಡ, ಕೌಶಿಕ್, ಹರ್ಷನಾಯಕ್, ನವೀನ್ ಕುಮಾರ್, ಹೇಮಾವತಿ, ವಿನೋದ್, ಪ್ರಸಾದ್, ಶ್ರೀನಿವಾಸ್, ಶ್ರೀಧರ್, ಭರತ್, ಮಂಜು ಇತರರಿದ್ದರು.