ಬಳ್ಳಾರಿ ; ಮುಂದಿನ ದಿನಗಳಲ್ಲಿ ಜಿಲ್ಲೆಯ ರೈತರು ಸಿರಿಧಾನ್ಯ ಬೆಳೆಯಲು ಆಸಕ್ತಿ ವಹಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ಇಲ್ಲಿನ ಸರ್ಕಾರಿ (ಮುನ್ಸಿಪಲ್) ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕೃಷಿ ಇಲಾಖೆ ಸಹಯಯೋಗೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿರಿಧಾನ್ಯ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ, ಸಂಸ್ಕರಣಾ ಘಟಕಗಳ ಸ್ಥಾಪನೆ ಸೇರಿದಂತೆ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ನೀಡಲಾಗುವುದು. ಇತ್ತೀಚಿನ ದಿನಮಾನಗಳಲ್ಲಿ ಮಳೆಯ ಕೊರತೆ ಹೆಚ್ಚು ಕಂಡುಬರುತ್ತಿದೆ. ಅದಕ್ಕಾಗಿ ರೈತರು ಹವಾಮಾನಕ್ಕೆ ಅನುಗುಣವಾಗಿ ಬೆಳೆ ಪದ್ದತಿ ಅಳವಡಿಸಿಕೊಳ್ಳಬೇಕು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಾಗಿ ಭತ್ತ ಬೆಳೆಯುತ್ತಿದ್ದಾರೆ. ಭತ್ತದ ಜತೆಗೆ ಸಿರಿಧಾನ್ಯ ಬೆಳೆಗಳಾದ ಸಜ್ಜೆ, ನವಣೆ, ರಾಗಿ ಸೇರಿದಂತೆ ವಿವಿಧ ಬೆಳೆಗಳನ್ನು ಸಹ ಬೆಳೆಯಬೇಕು ಎಂದರು.
ಸಿರಿಧಾನ್ಯಗಳ ಬಗ್ಗೆ ಮಹಾನಗರಗಳಲ್ಲಿನ ಸಾರ್ವಜನಿಕರು ಹೆಚ್ಚು ಅರಿವು ಹೊಂದಿದ್ದಾರೆ. ಸಿರಿಧಾನ್ಯಗಳ ಬಳಕೆಯಿಂದ ಆರೋಗ್ಯಯುತ ಜೀವನಕ್ಕೆ ಸಾಕಷ್ಟು ಪ್ರಯೋಜನೆಗಳು ಇವೆ ಎಂದು ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರು ಮಾತನಾಡಿ, 2023ರ ವರ್ಷವನ್ನು ಸಿರಿಧಾನ್ಯಗಳ ವರ್ಷ ಎಂದು ಘೋಷಿಸಲಾಯಿತು. ಸಿರಿಧಾನ್ಯಗಳ ಮಹತ್ವವನ್ನು ಸಾರ್ವಜನಿಕರಲ್ಲಿ ಹೆಚ್ಚು ಹೆಚ್ಚು ಮೂಡಿಸಬೇಕು. ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಸೇವನೆಯಿಂದ ರೋಗ-ರುಜಿನಗಳು ಹೆಚ್ಚಾಗಿ ಕಂಡು ಬರುತ್ತಿವೆ. ಸಿರಿಧಾನ್ಯಗಳ ಸೇವನೆಯಿಂದ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳ್ಳಬಹುದು ಎಂದರು.
ಜಂಟಿ ಕೃಷಿ ನಿರ್ದೇಶಕ ಕೆ.ಎಂ. ಸೋಮಸುಂದರ ಮಾತನಾಡಿ, ದೇಶದಲ್ಲಿ 142 ಕೋಟಿ ಜನಸಂಖ್ಯೆ ಇದೆ. 332 ಮಿಲಿಯನ್ ಟನ್‌ನಷ್ಟು ಆಹಾರ ಉತ್ಪಾದನೆ ಮಾಡುವ ಮೂಲಕ ಸ್ವಾವಲಂಬನೆ ಆಗಿದ್ದೇವೆ. ಮುಂದಿನ 5 ವರ್ಷಗಳವರೂ ಪ್ರತಿಯೊಬ್ಬರಿಗೆ ಒದಗಿಸುವಷ್ಟು ಆಹಾರ ನಮ್ಮಲ್ಲಿದೆ. ಆದರೆ ಪೋಷಕಾಂಶಯುಕ್ತ ಆಹಾರ ಸಿಗುತ್ತಿಲ್ಲ ಬೇಸರ ವ್ಯಕ್ತಪಡಿಸಿದರು. ಸಿರಿಧಾನ್ಯ ಬೆಳೆ ಬೆಳೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರವು ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ರೈತರು ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಳಿಕ ಸಿರಿಧಾನ್ಯ ಬೆಳೆಗಳ ಉತ್ಪಾಧನಾ ತಾಂತ್ರಿಕತೆ ಮತ್ತು ಅವುಗಳ ಮೌಲ್ಯವರ್ಧನೆ ಕುರಿತ ಮಾಹಿತಿ ಕೈಪಿಡಿ ಬಿಡುಗಡೆ ಮಾಡಿದರು. ನಂತರ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಅಂತರಾಷ್ಟ್ರೀಯ ಸಾವಯವ ಮತ್ತು ಸಿರಿಧಾನ್ಯ ಮೇಳದ ಅಂಗವಾಗಿ ಮುನಿಸಿಪಲ್ ಕಾಲೇಜ್ ಮೈದಾನದ ಆವರಣದಲ್ಲಿ ಸಿರಿಧಾನ್ಯಗಳಿಂದ ತಯಾರಿಸಿದ ಉತ್ಪನ್ನಗಳ ಮಳಿಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಹಾಗೂ ವಿವಿಧ ಕೃಷಿ ಪರಿಕರಗಳ ಮಳಿಗೆಗಳು ಸೇರಿದಂತೆ ಒಟ್ಟು 40 ಮಳಿಗೆಗಳು ಹಾಕಲಾಗಿತ್ತು.
ಬಾಕ್ಸ್ : ನಗರದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಸಿರಿಧಾನ್ಯಗಳ ಕಾರ್ಯಾಗಾರ ಕಾರ್ಯಕ್ರಮ ಬೆಳಗ್ಗೆ 11 ಗಂಟೆಗೆ ಉದ್ಘಾಟನೆಯಾಗಿಬೇಕಿತ್ತು. ಆಹ್ವಾನಿತರು ತಡವಾಗಿ ಆಗಮಿಸಿದ್ದರಿಂದ ಮಧ್ಯಾಹ್ನ ಒಂದು ಗಂಟೆಗೆ ಆರಂಭವಾಯಿತು. ಅಲ್ಲದೆ, ಗಣ್ಯರು ಭಾಷಣ ಆರಂಭಿಸುವ ವೇಳೆ ಬಹುತೇಕ ಕುರ್ಚಿಗಳಲ್ಲಿ ಜನರೇ ಇರಲಿಲ್ಲ. ಸುತ್ತಲಿನ ಕಾಲೇಜು ವಿದ್ಯಾರ್ಥಿಗಳನ್ನು ಆಹ್ವಾನಿಸಿ ಕೂರಿಸಲಾಗಿತ್ತು. ಬೃಹತ್ ಜಿಲ್ಲಾಮಟ್ಟದ ಕಾರ್ಯಾಗಾರದ ಬಗ್ಗೆ ಪ್ರಚಾರ ಮಾಡಿ ರೈತರಿಗೆ ಮಾಹಿತಿ ಒದಗಿಸಬೇಕಿದ್ದ ಕೃಷಿ ಇಲಾಖೆ ಪ್ರಚಾರದಲ್ಲಿ ಎಡವಿದೆ. ಆಹ್ವಾನಿತ ಗಣ್ಯರು ಹಾಗೂ ರೈತರನ್ನು ಸನ್ಮಾನಿಸುವ ವೇಳೆ ಪ್ರತಿ ಬಾರಿ ಕಾರ್ಯಕ್ರಮದ ನಿರೂಪಕಿ ಜನರನ್ನು ಚಪ್ಪಾಳೆ ತಟ್ಟಿ ಎಂಬುದಾಗಿ ಹೇಳುವುದು ಕಂಡು ಬಂತು.