ಬಳ್ಳಾರಿ : ಜಿಲ್ಲೆಯಲ್ಲಿ ಈ ಬಾರಿ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ನೋಂದಣಿಗೆ ರೈತರು ನಿರಾಸಕ್ತಿ ವಹಿಸಿದ್ದಾರೆ. ಕಳೆದ ಸಾಲಿಗಿಂತ ಈ ಬಾರಿ ಶೇ. ಅರ್ಧದಷ್ಟು ರೈತರು ಕೂಡ ಬೆಳೆ ವಿಮೆ ಮಾಡಿಸಿಕೊಂಡಿಲ್ಲ.
ಜಿಲ್ಲೆಯಲ್ಲಿ ಪ್ರಸ್ತಕ 2025 -26ನೇ ಸಾಲಿನಲ್ಲಿ ಬಳ್ಳಾರಿ 860, ಕುರುಗೋಡು 485, ಸಂಡೂರು 979, ಸಿರಗುಪ್ಪ 553 , ಕಂಪ್ಲಿ 922 ಸೇರಿ ಒಟ್ಟಾರೆ ಕೇವಲ 3,799 ರೈತರು ವಿಮೆಗೆ ನೋಂದಣಿಸಿಕೊಂಡಿದ್ದಾರೆ. ಕಳೆದ 2024-25ನೇ ಸಾಲಿನಲ್ಲಿ 15,974 ರೈತರು ನೋಂದಣಿಸಿಕೊಂಡಿದ್ದರು. ಇದರಲ್ಲಿ 5401 ಮಂದಿಗೆ 9.12 ಪರಿಹಾರ ಸಿಕ್ಕಿತ್ತು. 2023 -24ನೇ ಸಾಲಿನಲ್ಲಿ 4,757 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದರು. 804 ರೈತರಿಗೆ ಒಟ್ಟಾರೆ 99.84 ಲಕ್ಷ ರೂ. ಬೆಳೆ ವಿಮೆ ಪರಿಹಾರ ಸಿಕ್ಕಿತ್ತು. 2022-23ನೇ ಸಾಲಿನಲ್ಲಿ 4,026 ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದರು. 1,766 ರೈತರಿಗೆ 4.26 ಕೋಟಿ ರೂ. ವಿಮಾ ಪರಿಹಾರ ಮೊತ್ತ ಸಿಕ್ಕಿತ್ತು.
ಪ್ರಸ್ತಕ ಸಾಲಿನಲ್ಲಿ ಮುಸುಕಿನ ಜೋಳ, ಜೋಳ, ಸೂರ್ಯ ಕಾಂತಿ, ತೊಗರಿ, ಹತ್ತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ ಮತ್ತು ಎಳ್ಳು ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜುಲೈ 31ಕ್ಕೆ ಪೂರ್ಣಗೊಂಡಿದೆ. ಭತ್ತ, ತೊಗರಿ, ರಾಗಿ, ನವಣೆ, ಹುರುಳಿ, ನೆಲಗಡಲೆ ಮತ್ತು ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಲು ಆ.16 ಕೊನೆಯ ದಿನವಾಗಿದೆ. ಇನ್ನೂ ಐದು ದಿನಗಳಲ್ಲಿ ಈ ಬಾರಿ ಕೃಷಿ ಹಾಗೂ ತೋಟಗಾರಿಕೆಯ ನಿರೀಕ್ಷೆಯ ಗುರಿ ಸಾಧಿಸುವುದೇ ಎಂಬುದು ಸವಾಲುಯಾಗಿದೆ.
ಜಿಲ್ಲೆಯ ಭೌಗೋಳಿಕ ವ್ಯಾಪ್ತಿಯಲ್ಲಿ 4.43 ಲಕ್ಷ ಹೆಕ್ಟೇರ್, ಸಾಗುವಳಿ ಕ್ಷೇತ್ರದ ವ್ಯಾಪ್ತಿ 2.78 ಲಕ್ಷ ಹೆಕ್ಟೇರ್ ಪ್ರದೇಶವಾಗಿದೆ. ಮುಂಗಾರು ಹಂಗಾಮಿನಲ್ಲಿ 1.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಗುರಿ ಹೊಂದಿದೆ. 65 ಲಕ್ಷ ಹೆಕ್ಟೇರ್ ಮಳೆಯಾಶ್ರೀತ ಪ್ರದೇಶ ಹೊಂದಿದೆ. ಕಳೆದ ತಿಂಗಳು ತುಂಗಭದ್ರ ಜಲಾಶಯದಿಂದ ನೀರು ಹರಿಸದ ಬಳಿಕ ಈವರೆಗೆ ಜಿಲ್ಲೆಯಲ್ಲಿ ಶೇ. 80 ರಷ್ಟು ಬಿತ್ತನೆಯಾಗಿದೆ.
ಜಾಗೃತಿ ಅಭಿಯಾನ : ಬೆಳೆ ವಿಮೆ ಹೆಚ್ಚಿಸಲು ಕೃಷಿ ಇಲಾಖೆಯೂ ಹಲವು ಕಸರತ್ತು ಮಾಡಲಾಗುತ್ತಿದೆ. ಜಾಗೃತಿ ಅಭಿಯಾನ ಕೈಗೊಂಡರೂ ಗುರಿ ಸಾಧಿಸಿಲ್ಲ. ಗ್ರಾಮ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ನಾನಾ ಉದ್ದೇಶಗಳಿಗಾಗಿ ಬ್ಯಾಂಕ್‌ಗೆ ಬರುವ ರೈತರಿಗೆ ಬೆಳೆ ವಿಮೆ ಮಾಡಿಸುವಂತೆಯೂ ಮನವಿ ಮಾಡಲಾಗುತ್ತಿದೆ. ಇಷ್ಟಾದರೂ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿಲ್ಲ. ಬೆಳೆ ವಿಮೆ ಎಂದರೆ, ಬೆಳೆ ನಷ್ಟವಾದ ಸಂದರ್ಭದಲ್ಲಿ ಮಾತ್ರವೇ ದೊರೆಯುವ ಪರಿಹಾರ. ಆದರೆ, ಬೆಳೆ ವಿಮೆ ಮಾಡಿಸಿದರೆ ಕಡ್ಡಾಯವಾಗಿ ಪರಿಹಾರ ಬರಲೇಬೇಕು ಎಂಬ ಭಾವನೆ ರೈತರಲ್ಲಿ ಮೂಡಿದೆ. ಇದರಿಂದ ಪರಿಹಾರ ಸಿಗದೇ ಇದ್ದಾಗ ನಿರಾಶರಾಗುತ್ತಿದ್ದಾರೆ. ಅಲ್ಲದೆ, ನಷ್ಟ ಹೊಂದಿದ ಬೆಳೆ ವಿಮೆ ಹಣ ರೈತರ ಖಾತೆಗೆ ಪಾವತಿಯಾಗಲು ವಿಳಂಬಗೊಳ್ಳುತ್ತಿದೆ ಎಂಬ ಅಕ್ರೋಶ ರೈತರಲ್ಲಿದೆ. ಅಲ್ಲದೆ, ಈ ಬಾರಿ ಜಿಲ್ಲಾದ್ಯಂತ ಉತ್ತಮ ಮಳೆ ಸುರಿಯುತ್ತಿರುವುದರಿಂದ ಫಸಲು ಹಾಳಾಗುವುದಿಲ್ಲ ಎಂಬ ಮನೋಭಾವನೆಯಿಂದ ವಿಮೆ ಮಾಡಿಸಿಕೊಳ್ಳಲು ಆಸಕ್ತಿ ವಹಿಸುತ್ತಿಲ್ಲ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಕೋಟ್... ಜಿಲ್ಲೆಯಲ್ಲಿ ಇಲಾಖೆಯಿಂದ ಅಭಿಯಾನ ಹಮ್ಮಿಕೊಂಡು ರೈತರಿಗೆ ವಿಮೆ ಬಗ್ಗೆ ಅರಿವು ಮೂಡಿಸಲಾಗಿದೆ. ಭತ್ತ ಸೇರಿದಂತೆ ಕೆಲ ಬೆಳೆಗಳಿಗೆ ಇನ್ನೂ ಕಾಲ ಅವಕಾಶವಿದ್ದು ರೈತರು ಬೆಳೆ ವಿಮೆ ಮಾಡಿಸಬೇಕು.
- ಸೋಮಸುಂದರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬಳ್ಳಾರಿ.