ಭೂ ಸುರಕ್ಷ ಯೋಜನೆ ತ್ವರಿತಗೊಳಿಸಿ

Published on

ಬಳ್ಳಾರಿ: ಭೂ ಸುರಕ್ಷಾ ಯೋಜನೆಯನ್ನು ಭೂ ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗಿದ್ದು, ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಸರಾಸರಿ 10 ಸಾವಿರ ಪುಟಗಳ ಸ್ಕಾೃನ್ ಹಾಗೂ ಅಪ್‌ಲೋಡ್ ಆಗಬೇಕು ಎಂದು ನಿರ್ದೇಶಿಸಿದರು.

ಜಿಲ್ಲೆಯಲ್ಲಿ ಹಟ್ಟಿ, ತಾಂಡಾ ನಿವಾಸಿಗಳಿಗೆ ಶಾಶ್ವತ ನೆಮ್ಮದಿ ನೀಡುವ ಸಲುವಾಗಿ ತಾಂಡಾಗಳಿಗೆ ಕಂದಾಯ ಗ್ರಾಮದ ಸ್ಥಾನಮಾನ ನೀಡಲು ನಮ್ಮ ಸರ್ಕಾರ ನಿರ್ಧರಿಸಲಾಗಿದ್ದು, ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಅರ್ಹವಿರುವ ಗ್ರಾಮಗಳಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದರು.

ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಟ್ಟಿ, ಹಾಡಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮದ 1 ಕಿ.ಮೀ ವ್ಯಾಪ್ತಿ ಒಳಗೆ ಇದ್ದು, 10 ಮನೆಗಳಿಗಿಂತಲೂ ಹೆಚ್ಚು ಇದ್ದರೆ ಉಪ ಗ್ರಾಮ ರಚನೆ ಮಾಡಲು ಅವಕಾಶ ಇದೆ. ಜನರಿಗೆ ನಾವು ಸ್ಥಿರ ಬದುಕು ನೀಡಬೇಕು. ಬಿಟ್ಟು ಹೋಗಿರುವ ಕಂದಾಯ ಗ್ರಾಮಗಳ ರಚನೆ ಹಾಗೂ ಗುರುತಿಸುವ ಕಾರ್ಯ ಆಗಬೇಕು ಎಂದರು.

ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮಾತನಾಡಿ, ಕಂದಾಯ ಗ್ರಾಮಗಳ ರಚನೆಗೆ ಜಿಲ್ಲೆಯಲ್ಲಿ ಒಟ್ಟು 74 ಗ್ರಾಮಗಳ ಗುರುತಿಸಲಾಗಿದ್ದು, ಈಗಾಗಲೇ 71 ಪ್ರಾಥಮಿಕ ಸೂಚನೆ ಹಾಗೂ ಸರ್ಕಾರದಿಂದ 51 ಗ್ರಾಮಗಳು ಅಂತಿಮ ಅಧಿಸೂಚನೆ ಹೊರಡಿಸಿದ್ದು, 1 ಗ್ರಾಮವು ಅಂತಿಮ ಅಧಿಸೂಚನೆಗೆ ಸಲ್ಲಿಕೆಯಾಗಿದೆ. ಇನ್ನೂ 19 ಗ್ರಾಮಗಳು ಅಂತಿಮ ಅಧಿಸೂಚನೆಗೆ ಬಾಕಿ ಇರುವ ಗ್ರಾಮಗಳಾಗಿವೆ ಎಂದು ಮಾಹಿತಿ ನೀಡಿದರು.

ಕೋಟ್... ಕಂದಾಯ ಗ್ರಾಮಗಳ ಸಂಖ್ಯೆಗಿಂತ ವಸತಿ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ಇಲ್ಲಿ ದಾಖಲೆ ರಹಿತ ವಸತಿ ಪ್ರದೇಶಗಳ ನಮೂದಾಗಿರುತ್ತವೆ. ಕಂದಾಯ ಇಲಾಖೆಯ ಬಳಿ ದಾಖಲೆ ಸಹಿತ ಗ್ರಾಮಗಳ ಮಾಹಿತಿ ಇರುತ್ತದೆ. ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಗಮನಿಸಿ, ಗ್ರಾಮ ರಚನೆ ಮಾಡಬೇಕು. ದಾಖಲೆ ರಹಿತ ಇದ್ದಲ್ಲಿ ಅವರಿಗೆ ಒಂದು ದಾಖಲೆ ಕಲ್ಪಿಸಿ, ಬದುಕು ಕಲ್ಪಿಸಿಕೊಡಬೇಕಿದೆ.

- ಕೃಷ್ಣ ಬೈರೇಗೌಡ, ಕಂದಾಯ ಸಚಿವ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net