ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು ಎಂದು ಎಡಿಸಿ ಮಹಮ್ಮದ್ ಎನ್.ಜುಬೇರ್ ಹೇಳಿದರು.
ನಗರದ ಎಡಿಸಿ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಕಾರ್ಮಿಕ ಇಲಾಖೆ, ಗೃಹ ರಕ್ಷಕ ದಳ ಇಲಾಖೆ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಮಾನವೀಯ ದಿನಾಚರಣೆ ಅಂಗವಾಗಿ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವೀಯ ಮೌಲ್ಯಗಳು ಸ್ವಯಂ ಪ್ರೇರಿತರಾಗಿ ಅಳವಡಿಸಿಕೊಳ್ಳಬೇಕಿದೆ. ಪ್ರವಾಹ, ಅನಿರೀಕ್ಷಿತ ಕಟ್ಟಡ ಕುಸಿತ ಹಾಗೂ ಯುದ್ಧದ ಸಂದರ್ಭದಲ್ಲಿ ತಕ್ಷಣ ಭಾಗವಹಿಸಿ ಸಹಾಯ ಒದಗಿಸುವುದು ಮಾನವೀಯತೆಯ ಲಕ್ಷಣವಾಗಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡ ಆಗಮಿಸಲು ತಡವಾದಾಗ ಸುತ್ತ-ಮುತ್ತಲಿನವರು ಜಾಗರೂಕರಾಗಿ ಮಾನವೀಯತೆಯ ಮೂಲಕ ಸಹಾಯ ಕರ್ತವ್ಯ ಮರೆಯಬೇಕು. ಇಲ್ಲದಿದ್ದಲ್ಲಿ ಆ ಜೀವನವು ಮೌಲ್ಯಯುತವಾದುದಲ್ಲ ಎಂದು ಸಲಹೆ ನೀಡಿದರು
ನಾವು ಸುರಕ್ಷಿತರಾಗಿರಬೇಕು ಹಾಗೂ ಇತರರನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಜಾಗರೂಕರಾಗಿರಬೇಕು. ಅಧಿಕಾರಿಗಳು ಸಹ ಸಾರ್ವಜನಿಕ ಸೇವೆ ಸೌಲಭ್ಯ ಒದಗಿಸಲು ವಿಳಂಬ ಮಾಡಬಾರದು. ಜನರನ್ನು ಕಚೇರಿಗಳಿಗೆ ಅಲೆದಾಡಿಸಬಾರದು ಕಿವಿ ಮಾತು ಹೇಳಿದರು.
ಬಳಿಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಆರೋಗ್ಯ, ಕಾರ್ಮಿಕ, ಅಗ್ನಿಶಾಮಕ ಮತ್ತು ವಿಕಲಚೇತನರ ಕಲ್ಯಾಣ ಇಲಾಖೆಯ ಅಧಿಕಾರಿಗಳು ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಐದು ವಿಷಯಗಳ ಕುರಿತು ಸಲಹೆಗಳು ವಿವರಿಸಿದರು.