ಪ್ರತಿಯೊಬ್ಬರಿಗೂ ಗ್ರಾಹಕರ ರಕ್ಷಣೆ ಕಾಯ್ದೆ ಅರಿವು ಅಗತ್ಯ

Published on

ಬಳ್ಳಾರಿ ; ಹಣ ನೀಡಿ ಸೇವೆ ಸ್ವೀಕರಿಸುವ ಪ್ರತಿಯೊಬ್ಬರೂ ಗ್ರಾಹಕರಾಗಿದ್ದು, ಸೇವೆಯಲ್ಲಿ ಲೋಪವಾದಾಗ ಗ್ರಾಹಕರ ರಕ್ಷಣೆ ಕಾಯ್ದೆ ಕುರಿತು ಅರಿವು ಹೊಂದುವುದು ಅಗತ್ಯವಾಗಿದೆ ಎಂದು ನ್ಯಾಯಧೀಶ ವಿದ್ಯಾಧರ ಶಿರಹಟ್ಟಿ ಹೇಳಿದರು.

ಇಲ್ಲಿನ ವಿಎಸ್‌ಕೆ ವಿವಿಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಿವಿ ಸಹಯೋಗದೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಸ್ತು-ಆಹಾರ ವಿಷಯ ಸೇರಿದಂತೆ ಗ್ರಾಹಕರು ಖರೀದಿಸುವ ಇನ್ನಿತರೆ ಸಾಮಾಗ್ರಿಗಳಲ್ಲಿ ರಾಜಿ ಸಲ್ಲ. ಗಾಳಿ, ಬೆಳಕು, ನೀರು ಶುದ್ಧವಾಗಿರುವಂತೆ ಹೇಗೆ ಬಯಸುತ್ತೇವೋ ಅದೇ ರೀತಿ ಗ್ರಾಹಕರು ಖರೀದಿಸುವ ಪ್ರತಿಯೊಂದು ವಸ್ತುವಿನಲ್ಲಿ ಶುಭ್ರತೆ, ಗುಣಮಟ್ಟ ಅಪೇಕ್ಷೆ ಪಡುವುದು ಗ್ರಾಹಕರ ಕರ್ತವ್ಯವಾಗಿದೆ ಎಂದರು.

ಸೇವಾ ವಲಯ ಮತ್ತು ವಾಣಿಜ್ಯ ವಲಯ ಸೇರಿದಂತೆ ಇತರೆ ವಲಯಗಲ್ಲಿ ಗ್ರಾಹಕರು ನ್ಯೂನತೆ ಎದುರಿಸಿದಲ್ಲಿ ಕಾನೂನಾತ್ಮಕ ರಕ್ಷಣೆಗೆ ಮುಂದಾಗಬೇಕು. ಆನ್‌ಲೈನ್ ವಹಿವಾಟಿನಲ್ಲಿ ಮೋಸ ಹೋಗುವ ಸಂಭವವಿದ್ದು, ಕಾನೂನು ತಿಳುವಳಿಕೆ ಇರಬೇಕು ಎಂದು ವಿದ್ಯಾರ್ಥಿ-ಗ್ರಾಹಕರಿಗೆ ಸಲಹೆ ನೀಡಿದರು.

ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಗ್ರಾಹಕರೇ ಹೆಚ್ಚು ವಂಚಿತರಾಗುತ್ತಿದ್ದು, ಅವರು ಎಚ್ಚೆತ್ತುಕೊಳ್ಳಬೇಕಿದೆ. ಅವಿದ್ಯಾವಂತರಿಗೆ ಮತ್ತು ತಮ್ಮ ನೆರೆ-ಹೊರೆಯರಿಗೆ ಗ್ರಾಹಕರ ರಕ್ಷಣೆಯ ಕಾನೂನು-ಕಾಯ್ದೆ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಎನ್. ತಿಪ್ಪೇಸ್ವಾಮಿ ಮಾತನಾಡಿ, ಹಣ ನೀಡಿ ಸೇವೆ ಪಡೆಯುವ ಎಲ್ಲರೂ ಗ್ರಾಹಕರೆ. ಗ್ರಾಹಕರು ಖರೀದಿಸುವ ವಸ್ತು ಅಥವಾ ಸಾಮಾಗ್ರಿಗಳಲ್ಲಿ ಲೋಪವಾದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿದರೇ, ಗ್ರಾಹಕರ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಒದಗಿಸಿ ಕೊಡಲಾಗುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net