ಬಳ್ಳಾರಿ : ಮಂಜೂರಾದ ಹಾಲಿ ವಿದ್ಯುತ್ ಮಾಪಕವನ್ನು ಬೈಪಾಸ್ ಮಾಡಿ ತಮ್ಮ ಕೈಗಾರಿಕಾ ವಿದ್ಯುತ್ ಉಪಕರಣಗಳಿಗೆ ಕಳ್ಳತನದಿಂದ ವಿದ್ಯುತ್ ಉಪಯೋಗಿಸಿ ಅನಧಿಕೃತ ಲಾಭ ಪಡೆದಿರುವ ಆರೋಪಿಗೆ 18,02,951 ಲಕ್ಷ ರೂ. ದಂಡ ಮತ್ತು ದಂಡ ಪಾವತಿಸದೆ ಇದ್ದಲ್ಲಿ ಮೂರು ತಿಂಗಳು ಸಾದಾ ಶಿಕ್ಷೆ ವಿಧಿಸಿ ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿದ್ಯಾಧರ ಶಿರಹಟ್ಟಿ ಜ.20 ರಂದು ತೀರ್ಪು ಆದೇಶಿಸಿದ್ದಾರೆ.
ಜೆಸ್ಕಾಂ ಜಾಗೃತ ದಳದ ಎಇ ಕೆ.ಗಾದಿಲಿಂಗಪ್ಪ , ಸಿಬ್ಬಂದಿಯೊಂದಿಗೆ 2022ರ ಆ.18 ರಂದು ಜಿಲ್ಲೆಯ ವಿವಿಧೆಡೆ ವಿದ್ಯುತ್ ಕಳ್ಳತನ ಪ್ರಕರಣ ಪತ್ತೆಗೆ ತೆರಳಿದ ವೇಳೆ ಸಂಡೂರು ತಾಲೂಕಿನ ಏಳುಬೆಂಚಿಯ ಆರ್‌ಒ ಪ್ಲಾಂಟ್‌ನ ಪೂರ್ಣಿಮ ಎಂಟರ್ ಪ್ರೈಸೆಸ್ ಮಾಲೀಕ ಅಮರೇಶ್ವರ ಶಾಸ್ತ್ರಿ ಜೆಸ್ಕಾಂ ಕಂಪನಿಗೆ ಹಾನಿ ಮಾಡಿರುವುದು ಕಂಡುಬಂದಿದ್ದು, ಇವರ ಮೇಲೆ ಕ್ರಮ ಕೈಗೊಳ್ಳಲು ಜೆಸ್ಕಾಂ ಇಲಾಖೆಯವರು ಲಿಖಿತ ದೂರು ನೀಡಿದ್ದರು.
ತನಿಖಾಧಿಕಾರಿ ಪಿಎಸ್‌ಐ ಆರ್.ಗಾಯತ್ರಿ ಹಾಗೂ ಜೆಸ್ಕಾಂ ಜಾಗೃತದಳ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಬಿ.ಜೆ.ರೆಹಮಾನ್, ಪೇದೆಗಳು ಸಾಕ್ಷಿಗಳ ವಿಚಾರಣೆ ಕಾಲಕ್ಕೆ ಸಹಕರಿಸಿದ್ದರು. ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಶೇಖರಪ್ಪ ಅಭಿಯೋಜನೆ ಪರವಾಗಿ ವಾದ ಮಂಡಿಸಿದ್ದರು.