ಬಳ್ಳಾರಿ : ಹಾಲು ಉತ್ಪಾದನೆಯಲ್ಲಿ ಡಾ.ವರ್ಗೀಸ್ ಕುರಿಯನ್ ಅವರ ಸೇವೆ ಅಪಾರವಾಗಿದೆ ಎಂದು ರಾಬಕೊವಿ ಜಿಲ್ಲಾ ಹಾಲು ಒಕ್ಕೂಟದ ಮಾರುಕಟ್ಟೆಯ ವ್ಯವಸ್ಥಾಪಕ ಕೆ.ಎಸ್.ಎರ‌್ರಿಸ್ವಾಮಿರೆಡ್ಡಿ ಹೇಳಿದರು.
ನಗರದ ಬಾಲಕಿಯರ ಬಾಲಮಂದಿರದಲ್ಲಿ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಕ್ಷೀರಕ್ರಾಂತಿಯ ಪಿತಾಮಹ ಪದ್ಮಭೂಷಣ ಡಾ.ವರ್ಗೀಸ್ ಕುರಿಯನ್ ಅವರ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಹಾಲು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಮೂಲ್ ಡೇರಿಯ ಸ್ಥಾಪಕರು ಮತ್ತು ಭಾರತದಲ್ಲಿ ಅಪರೇಷನ್ ಫ್ಲಡ್ (ಕ್ಷೀರ ಕ್ರಾಂತಿ) ಎಂಬ ಜಗತ್ತಿನ ಅತಿ ದೊಡ್ಡ ಡೇರಿ ಯೋಜನೆಯನ್ನು ಪ್ರಾರಂಭಿಸಿ ವಿಶ್ವದ ಅತಿ ದೊಡ್ಡ ಹಾಲು ಉತ್ಪಾದಕರ ದೇಶವನ್ನಾಗಿ ಮಾಡಲು ಕಾರಣೀಕೃತರಾದ ಡಾ.ವರ್ಗೀಸ್ ಕುರಿಯನ್ ಅವರ ಜನ್ಮ ದಿನವಾದ ನ.26 ರಂದು ರಾಷ್ಟ್ರೀಯ ಹಾಲು ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ರಾಬಕೊವಿ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಟಿ.ಮಲ್ಲಿಕಾರ್ಜುನ ಮಾತನಾಡಿ, ದೈನಂದಿನ ಜೀವನದಲ್ಲಿ ಬಹಳಷ್ಟು ಕಲಬೆರಕೆ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರವಿರಲು ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಉಪಯೋಗಿಸಿ ಆರೋಗ್ಯವಾಗಿರಬಹುದು ಎಂದರು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಹತ್ವ, ಸಮತೋಲನ ಆಹಾರದಲ್ಲಿರುವ ಪೋಷಕಾಂಶಗಳು ಹಾಗೂ ಆರೋಗ್ಯಕ್ಕೆ ಅವುಗಳ ಮಹತ್ವ ಕುರಿತು ಅರಿವು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ನಂದಿನಿ ಬಾದಾಮಿ ಹಾಲನ್ನು ವಿತರಿಸಲಾಯಿತು.