ಬಳ್ಳಾರಿ ; ಡಾ.ರಾಜ್ ಕುಮಾರ್ ಅವರು ಮೇರು ವ್ಯಕ್ತಿತ್ವದ ಖ್ಯಾತ ನಟ. ಅವರ ಸಾಮಾಜಿಕ ಕಳಕಳಿ, ಕನ್ನಡದ ಅಪಾರ ಪಾಂಡಿತ್ಯದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ಎಸಿ ಪಿ.ಪ್ರಮೋದ್ ಹೇಳಿದರು.
ಇಲ್ಲಿನ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದೊಂದಿಗೆ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆಯ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು. ವರನಟ ಡಾ.ರಾಜ್ ಕುಮಾರ್ ಅವರಂತೆ ಆದರ್ಶಗುಣ ಹಾಗೂ ಆಚಾರ-ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಯುವಜನಾಂಗ ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯ, ಸಾಮಾಜಿಕ ಕಳಕಳಿಯ ಚಲನಚಿತ್ರಗಳು ಜನರನ್ನು ಪ್ರಭಾವಿತಗೊಳಿಸಿದ್ದವು. ಅವರ ಎಲ್ಲ ಚಲನಚಿತ್ರಗಳನ್ನು ಕುಟುಂಬ ಸಮೇತರಾಗಿ ನೋಡುವಂತಹದ್ದಾಗಿದ್ದವು. ಬೀದರ್ ನಿಂದ ಚಾಮರಾಜನಗರ ದವರೆಗೆ ಕನ್ನಡಾಭಿಮಾನಿಯಾಗಿ ಸಮಾನ ಕನ್ನಡ ಭಾಷೆ ಮಾತನಾಡುವಂತೆ ಪ್ರೇರೇಪಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಬಳ್ಳಾರಿಯ ಮಸ್ತಾನ್ ಸೌಂಡ್ಸ್ ನ ಪ್ರತಿಭಾ ಆರ್ಕೆಷ್ಟ್ರಾ ವತಿಯಿಂದ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ತಂಡದ ರಘುಪತಿ, ಸರಸ್ವತಿ, ಉಮೇಶ್ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ ಎಲ್ಲರ ಮನ ಸೆಳೆದರು.
ಇದೇ ಸಂದರ್ಭದಲ್ಲಿ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನಪ್ಪಿದವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು.