ಬಳ್ಳಾರಿ ; ಇಲ್ಲಿನ ಬಿಪಿಎಸ್‌ಸಿ ಸಭಾಂಗಣದಲ್ಲಿ ಆ. 10 ರಂದು ಡಾ.ರಾಜಶೇಖರ ನೀರಮಾನ್ವಿ ಅವರ ನೆನಪು ಹಾಗೂ ಕಥೆಗಳ ಕುರಿತು ಮಾತುಕತೆ ಮತ್ತು ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ ಹೇಳಿದರು.
ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲೋಹಿಯಾ ಪ್ರಕಾಶನ ಹಾಗೂ ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ. ಪ್ರತಿಷ್ಠಾನದ ಅಧ್ಯಕ್ಷೆ ಸವಿತಾ ನಾಗಭೂಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಲೇಖಕಿ ಸವಿತಾ ನಾಗಭೂಷಣ ಉದ್ಘಾಟಿಸಲಿದ್ದಾರೆ. ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ಸರ್ವಮಂಗಳಾ ನೀರಮಾನ್ವಿ ಉಪಸ್ಥಿತಿರಲಿದ್ದಾರೆ ಎಂದರು.
ಬೆಳಗಿನ ಮಾತುಕತೆ ಲೇಖಕರಾದ ಡಾ.ರಾಜೇಂದ್ರ ಚೆನ್ನಿ, ಡಾ.ಪಿ.ಭಾರತಿ ದೇವಿ ಹಾಗೂ ಮಧ್ಯಾಹ್ನದ ಮಾತುಕತೆ ಡಾ.ಅಮರೇಶ ನುಗಡೋಣಿ, ಡಾ.ಚಿದಾನಂದ ಸಾಲಿ ನಡೆಸಲಿದ್ದಾರೆ. ಸಮಾರೋಪ ಕಾರ್ಯಕ್ರಮದಲ್ಲಿ ಚಂದ್ರಕಾಂತು ವಡ್ಡು ಅವರೊಂದಿಗೆ ಸಂವಾದ ನಡೆಯಲಿದೆ. ಕಾರ್ಯಕ್ರಮಕ್ಕೆ ಎರಡು ನೂರಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಡಾ.ರಾಜಶೇಖರ ನೀರಮಾನ್ವಿ ಅವರು ಹಂಗಿನರಮನೆಯ ಹೊರಗೆ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮೆ ಪುಸ್ತಕ ಬಹುಮಾನ ಮತ್ತು ಕರ್ಪೂರದ ಕಾಯದಲ್ಲಿ ಕೃತಿಗೆ ಸಿರವಾರದ ಉಮಾಪತಿ ಚುಕ್ಕಿ ಪ್ರತಿಷ್ಠಾನದ ಪ್ರಶಸ್ತಿ ದೊರಕಿದೆ. ಪ್ರಚಾರ, ಪ್ರಶಸ್ತಿ ಮತ್ತು ಪ್ರಸಿದ್ದಿಗಳಿಂದ ದೂರವಿದ್ದ ನೀರಮಾನ್ವಿ ಅವರಿಗೆ ಡಾ.ಬೆಟಗೇರಿ ಕೃಷ್ಣಶರ್ಮ ಕಥಾಪ್ರಶಸ್ತಿ, ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಹುಡುಕಿಕೊಂಡು ಬಂದವು ಎಂದು ಮೆಲುಕು ಹಾಕಿದರು. ಲೇಖಕರಾದ ದಸ್ತಗೀರ ಸಾಬ್, ವೀರೇಂದ್ರ ರಾವಿಹಾಳ್, ಪ್ರಭುದೇವ್ ಕಪ್ಪಗಲ್ ಇದ್ದರು.