ಬಳ್ಳಾರಿ : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಾ.ಎನ್.ತಿಪ್ಪಣ್ಣ(97) ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ನಿಧನ ಹೊಂದಿದರು.
ತಿಪ್ಪಣ್ಣ ಇವರಿಗೆ ಒಬ್ಬ ಪುತ್ರರಿದ್ದಾರೆ. ಇವರ ಅಂತ್ಯ ಸಂಸ್ಕಾರ ಚಿತ್ರದುರ್ಗ ಜಿಲ್ಲೆಯ ತುರವಿನೂರಿನಲ್ಲಿ ಶನಿವಾರ ಜರುಗಲಿದೆ. ಬಳ್ಳಾರಿಯ ಅವರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ತುರುವನೂರಿನಲ್ಲಿ 1928 ನವೆಂಬರ್ 28ರಂದು ಜನಿಸಿದರು. ಇವರು ಕರ್ನಾಟಕದ ಕಾನೂನು, ರಾಜಕೀಯ ಮತ್ತು ಸಾಮಾಜಿಕ - ಸಾಂಸ್ಕ್ರತಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿದ್ದರು. 1954ರಲ್ಲಿ ಬಳ್ಳಾರಿಯಲ್ಲಿ ವಕೀಲ ವೃತ್ತಿ ಆರಂಭಿಸಿ, ಜಿಲ್ಲಾ ಬಾರ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ರಾಜಕೀಯ ಹಿನ್ನೆಲೆ : ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಅಪ್ತರಾಗಿದ್ದ ತಿಪ್ಪಣ್ಣ ಬಳ್ಳಾರಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡರು. ನಂತರ ಜೆಡಿಯು ಪಕ್ಷವನ್ನು ಜನತಾದಳದೊಂದಿಗೆ ವಿಲೀನಗೊಳಿಸಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದರು. ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಮತ್ತು ಅಲ್ಪ ಅವಧಿಯ ಸಭಾಪತಿ ಹಾಗೂ ವಿರೋಧ ಪಕ್ಷದ ಉಪ ನಾಯಕರಾಗಿ ಸೇವೆ ಸಲ್ಲಿಸಿದರು.
ಶೈಕ್ಷಣಿಕ ಸಾಧನೆ : ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ಹುದ್ದೆಯನ್ನು ಹೊಂದಿದ್ದರು. ಇವರ ಅವಧಿಯಲ್ಲಿ ಶಾಲಾ ಹಾಗೂ ತಾಂತ್ರಿಕ ಶಾಲೆಗಳು ಸೇರಿದಂತೆ 40 ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ನೇತೃತ್ವ ವಹಿಸಿದ್ದರು. ಶೈಕ್ಷಣಿಕ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಪರಿಗಣಿಸಿ ಜಿಲ್ಲೆಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 8 ನೇ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ದೊರಕಿಸಿಕೊಟ್ಟಿತು. ತಿಪ್ಪಣ್ಣ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ರಾಜ್ಯದ ಹಲವು ಸಚಿವರು, ಶಾಸಕರು, ವಿವಿಧ ಮಠಾಧೀಶ ಸ್ವಾಮೀಜಿಗಳು ಹಾಗೂ ಗಣ್ಯರು ಡಾ.ಎನ್.ತಿಪ್ಪಣ್ಣ ನಿಧನಕ್ಕೆ ಸಂತಾಪ ಸೂಚಿಸಿದರು. ನಿಧನ ಹಿನ್ನೆಲೆ ಅವರ ಗೌರವಾರ್ಥವಾಗಿ ವೀ.ವಿ.ಸಂಘದ ವ್ಯಾಪ್ತಿಯ ನಗರದ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.
=======